ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹ

ಧಾರವಾಡ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೊಷವಾಕ್ಯದೊಂದಿಗೆ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಕಲಾಭವನ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಸರ್ಕಾರಿ ನೌಕರರಿಗೆ ಹಿಂದಿನ ದಿನಗಳಲ್ಲಿ ಇದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನೇ 2006ರ ಏಪ್ರಿಲ್ 1ರ ನಂತರ ಸೇವೆಗೆ ಸೇರಿರುವ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ನೌಕರರ ಇಳಿ ವಯಸ್ಸಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ಹಿಂದಿನ ಪದ್ಧತಿಯಂತೆ ನಿಶ್ಚಿತ ಪಿಂಚಣಿ ಜಾರಿಗೊಳಿಸುವುದು ಅಗತ್ಯ. ಹೊಸ ಪಿಂಚಣಿ ಯೋಜನೆ ಅಡಿ ನೌಕರರ ವೇತನದಲ್ಲಿ ಕಡಿತಗೊಳಿಸಲಾಗುವ ಶೇ. 10ರಷ್ಟು ವಂತಿಗೆಯು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆಯಾಗುತ್ತಿದೆ. ಇದಕ್ಕೆ ಸೂಕ್ತ ಕಾನೂನುಗಳು ಈವರೆಗೆ ರಚನೆಯಾಗಿಲ್ಲ. ಹೀಗಾಗಿ ಎನ್​ಪಿಎಸ್ ರದ್ದುಗೊಳಿಸಿ ನೌಕರರ ವಂತಿಗೆ ಹಣವನ್ನು ಜಿಪಿಎಫ್​ಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಹೋರಾಟದ ಫಲವಾಗಿ ಈಗಾಗಲೆ ಮರಣ ಮತ್ತು ನಿವೃತ್ತಿ ಉಪದಾನ (ಡಿಸಿಆರ್​ಜಿ) ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಗೊಂಡಿದೆ. ಹಳೆ ಯೋಜನೆ ಜಾರಿಯಾಗುವವರೆಗೂ ಹೋರಾಟ ನಡೆಸಲಾಗವುದು ಎಂದು ಎಚ್ಚರಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಲಾಯಿತು.

ರಕ್ತದಾನ: 300ಕ್ಕೂ ಹೆಚ್ಚು ನೌಕರರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಜಿಪಂ ಅತಿಥಿ ಗೃಹದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಕರೆಣ್ಣವರ, ರಾಜ್ಯ ಸಹ ಕಾರ್ಯದರ್ಶಿ ರಾಜು ಮಾಳವಾಡ, ಪದಾಧಿಕಾರಿಗಳಾದ ಪಿ.ಎಫ್. ಗುಡೇನಕಟ್ಟಿ, ಬಸವರಾಜ ದೇಸೂರ, ಜಗದೀಶ ವಿರಕ್ತಮಠ, ಎಂ.ಡಿ. ಅತ್ತಾರ, ಎಂ.ಎನ್. ಮುಲ್ಲಾನವರ, ಅಡಿವೇಶ ಗಾಯಕವಾಡ, ಅಯ್ಯಪ್ಪ ಮೊಕಾಶಿ, ರಾಜಶೇಖರಗೌಡ ಕಂಟೆಪ್ಪಗೌಡರ, ಕಿರಣ ಪಾಟೀಲ, ಉಮೇಶ ಕುರುಬರ, ಬಸವಂತಪ್ಪ ಕೇರಿ, ಮಂಜುನಾಥ ಯಲಿಗಾರ, ರಾಜು ಲಮಾಣಿ, ಮಾರ್ತಾಂಡಪ್ಪ ಕತ್ತಿ, ಇತರರು ಇದ್ದರು.