ಕನಿಷ್ಠ ವೇತನ ಜಾರಿಗೆ ಆಗ್ರಹ

ಮಂಡ್ಯ: ಹೈಕೋರ್ಟ್ ತೀರ್ಪಿನನ್ವಯ ಕನಿಷ್ಠ ವೇತನ ಜಾರಿಗೊಳಿಸುವುದು ಮತ್ತು ಕಾನೂನು ಬಾಹಿರವಾಗಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿರುವುದನ್ನು ವಿರೋಧಿಸಿ ಮೆ. ಮೆಗ್ನಿಷಿಯಂ ಆ್ಯಂಡ್ ಅಲೈಡ್ ಪ್ರಾಡಕ್ಟ್ ಕಾರ್ಮಿಕರ ಸಂಘ ಮತ್ತು ಸಿಐಟಿಯು ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ಕುಳಿತರು. 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆದ್ದರಿಂದ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ಕೂಲಿ ವ್ಯಾಪ್ತಿಗೊಳಪಡಿಸಬೇಕು. ತಂದೆ-ತಾಯಿ ಒಳಗೊಂಡ ಐದು ಘಟಕದ ಆಧಾರದಲ್ಲಿ ಕನಿಷ್ಠ ಕೂಲಿ ನಿಗದಿಗೊಳಿಸಬೇಕು. ಬೆಲೆ ಏರಿಕೆ ಸೂಚ್ಯಂಕ ನಿಗದಿಯಲ್ಲಿನ ಮೋಸ ನಿಲ್ಲಿಸುವುದು ಸೇರಿದಂತೆ 11 ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.

ಮದ್ದೂರು ತಾಲೂಕು ಹುರುಗಲವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಆಡಳಿತ ಮಂಡಳಿ ಯಾವುದೇ ಸೂಚನೆ ನೀಡದೆ ಕಾರ್ಮಿಕರಿಗೆ ಕೆಲಸ ನಿರಾಕರಿಸಿದೆ. ಎರಡು ತಿಂಗಳಿನಿಂದ ವೇತನ ನೀಡದೆ ಕಾರ್ಖಾನೆಯ ಬಾಗಿಲು ಮುಚ್ಚಲಾಗಿದೆ. ಇದರಿಂದಾಗಿ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ವರ್ಷದಿಂದ ಬೋನಸ್ ನೀಡಿಲ್ಲ, ಮೂಲ ಸೌಕರ್ಯಗಳನ್ನು ನೀಡದೆ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ ಕಾರ್ಮಿಕ ಅಧಿಕಾರಿಗಳು ಅಕ್ರಮ ಬೀಗ ಮುದ್ರೆ ತೆರವುಗೊಳಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು, ಉಪಾಧ್ಯಕ್ಷ ಮಾಯಣ್ಣ, ಸಹ ಕಾರ್ಯದರ್ಶಿ ರಾಮು, ಪ್ರಧಾನ ಕಾರ್ಯದರ್ಶಿ ಪಿ.ತಿಮ್ಮೇಶ್, ಚಲುವರಾಜು, ಸಿಐಟಿಯುನ ರಾಮಕೃಷ್ಣ, ಸಿ.ಕುಮಾರಿ, ಎಂ.ಎಂ.ಶಿವಕುಮಾರ್, ಜಯಲಕ್ಷ್ಮಮ್ಮ ಇತರರಿದ್ದರು.

——– —————-

Leave a Reply

Your email address will not be published. Required fields are marked *