ಕುಶಾಲನಗರ: ಕಳೆದ ತಿಂಗಳು ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಪ್ರದೇಶದ ಆದಿವಾಸಿ ಸಮಾಜಕ್ಕೆ ಸೇರಿದ ಪಣಿಯರ ಪೊನ್ನು ಅವರ ಸಾವಿನ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಸಿಐಟಿಯು ಸಂಘಟನೆ ವತಿಯಿಂದ ಕುಶಾಲನಗರ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಇದು ಮಾತ್ರವಲ್ಲದೆ ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ಹಲ್ಲೆ ನಡೆಸುವುದು, ದಬ್ಬಾಳಿಕೆ ನಡೆಸುವುದು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಈ ಕೃತ್ಯ ಎಸಗಿ, ಆದಿವಾಸಿ ಒಬ್ಬರ ಪ್ರಾಣ ಹರಣಕ್ಕೆ ಕಾರಣವಾದ ವ್ಯಕ್ತಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೃತ್ಯಕ್ಕೆ ಕಾರಣವಾದ ಕೋವಿ ಪರವಾನಿಗೆಯನ್ನು ರದ್ದು ಪಡಿಸಬೇಕು. ಕೃತ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಣಿಯರ ಪೊನ್ನು ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಬೇಕು. ಅವರ ವಿಧವಾ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಪಡಿತರ ಚೀಟಿಯೂ ಇಲ್ಲದ, ವಾಸಿಸಲು ಮನೆಯೂ ಇಲ್ಲದ ಕಾರಣ, ಮನೆ ನಿರ್ಮಿಸಲು ನೆರವು ನೀಡಬೇಕು. ಸ್ಥಳೀಯ ಶಾಸಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರ ಮನೆಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು. ಸಿಐಟಿಯು ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು, ಕೃತ್ಯವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ನಂತರ ಕುಶಾಲನಗರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಸಿಐಟಿಯು ತಾಲೂಕು ಸದಸ್ಯೆ ಎಂ.ಬಿ. ಜಮುನಾ, ರೈತ ಸಂಘದ ಮುಖಂಡರಾದ ಟಿ.ಟಿ. ಉದಯಕುಮಾರ್, ಆದಿವಾಸಿ ಮುಖಂಡರಾದ ಪುಷ್ಪ, ವೈ. ಸಿ. ಮುತ್ತ ಮತ್ತಿತರರು ಇದ್ದರು.