ನವಲಗುಂದ: ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿದ್ದ ಗುಡ್ಡದ ಅಕ್ರಮ ಮೊರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ತನಿಖೆ ನಡೆಯದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರ್ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ಪುರಸಭೆ ಮುಖ್ಯಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಗುಡ್ಡದ ಮೊರಂ ಅಕ್ರಮವಾಗಿ ಬೇರೆ ಕಡೆ ಸಾಗಾಟ ಮಾಡಿದ್ದಾರೆ ಎಂದು ದೂರು ಕೊಟ್ಟರೂ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ನವಲಗುಂದ ಪುರಸಭೆ ವ್ಯಾಪ್ತಿಗೆ ಬರುವ ಸರ್ಕಾರಿ ಗುಡ್ಡ ಸರ್ವೆ ನಂಬರ- 499/1ರ 46 ಎಕರೆಯ ವಿಸ್ತೀರ್ಣದಲ್ಲಿ ಆಗಿನ ಮುಖ್ಯಾಧಿಕಾರಿಗಳು ಎರಡು ಸಾವಿರಗಳಷ್ಟು ಟಿಪ್ಪರ್ ಮಣ್ಣನ್ನು ಖಾಸಗಿ ಹಿಟ್ಯಾಚಿ ಮತ್ತು ಟ್ರ್ಯಾಕ್ಟರ್ ಬಳಸಿ ಬೇರೆ ಕಡೆ ಸಾಗಾಟ ಮಾಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಗುಡ್ಡದ ಮೊರಂ ಬಳಕೆ ಮಾಡುವುದರ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಗುಡ್ಡ ಸಂರಕ್ಷಣೆಗಾಗಿ ಹೋರಾಟ ನಿರಂತರ:
ಪುರಸಭೆ ಅಧಿಕಾರಿಗಳು ಗುಡ್ಡದ ಮೊರಂನ್ನು ಅಕ್ರಮವಾಗಿ ಬೇರೆ ಕಡೆ ಸಾಗಿಸಿರುವ ಕುರಿತು ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ನ್ಯಾಯಾಲಯದಲ್ಲಿ ದಾವೆ ದಾಖಲಿಸಲಾಗುವುದು ಎಂದರು. ಮಲ್ಲಿಕಾರ್ಜುನಸ್ವಾಮಿ ಮಠಪತಿ ಇದ್ದರು.