ಇಂದಿರಾ ಕ್ಯಾಂಟೀನ್​ಗೆ ಬಹು ಬೇಡಿಕೆ

ವಿಜಯವಾಣಿ ವಿಶೇಷ ಹಾವೇರಿ

ಶ್ರಮಿಕರಿಗೆ, ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ನೀಡುವ ರಾಜ್ಯ ಸರ್ಕಾರದ ಪ್ರಾಯೋಜಿತ ಇಂದಿರಾ ಕ್ಯಾಂಟೀನ್​ಗೆ ನಗರದಲ್ಲಿ ಬಹುಬೇಡಿಕೆ ಬಂದಿದ್ದು, ಜನತೆ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ.

ಕ್ಯಾಂಟಿನ್​ನಲ್ಲಿ ಪ್ರತಿದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ನೀಡಲಾಗುತ್ತಿದೆ. ಆದರೆ, ಇದನ್ನು ಕೇವಲ 500 ಜನರಿಗೆ ಮಾತ್ರ ಸೀಮಿತಗೊಳಿಸಿರುವುದರಿಂದ ಅನೇಕರು ಸಿಗದೇ ಬರಿಗೈಲಿ ಹಿಂತಿರುಗುವಂತಾಗಿದೆ. ನಗರದಲ್ಲಿ ಬಹುದಿನಗಳ ನಂತರ ಕ್ಯಾಂಟೀನ್ ಆರಂಭವಾಗಿದ್ದು, ಜಿಲ್ಲಾ ಕೇಂದ್ರವಾಗಿರುವುದರಿಂದ ಅಕ್ಕಪಕ್ಕದ ತಾಲೂಕುಗಳಿಂದಲೂ ನಿತ್ಯ ಸಾವಿರಾರು ಕಾರ್ವಿುಕರು ಬರುತ್ತಾರೆ. ಹೀಗಾಗಿ ಊಟ, ಉಪಹಾರದ ಮಿತಿ ಕನಿಷ್ಠ 750ರಿಂದ 1 ಸಾವಿರಕ್ಕೆ ಏರಿಸಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿದೆ.

ಕಡಿಮೆ ದರದಿಂದ ಹೆಚ್ಚು ಬೇಡಿಕೆ: ಬೆಳಗ್ಗಿನ ಉಪಾಹಾರಕ್ಕೆ 5 ರೂ., ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ(ಅನ್ನ, ಸಾಂಬಾರ) 10 ರೂ. ದರ ನಿಗದಿಯಾಗಿದೆ. ಇಷ್ಟು ಕಡಿಮೆ ದರದಲ್ಲಿ ನಗರದ ಯಾವುದೇ ಹೋಟೆಲ್, ಬೀದಿಬದಿಯ ಅಂಗಡಿಯಲ್ಲಿ ಆಹಾರ ಸಿಗುವುದಿಲ್ಲ.

ಅಲ್ಲದೆ, ಇಂದಿರಾ ಕ್ಯಾಂಟೀನ್ ಇರುವ ಸ್ಥಳದ ಪಕ್ಕದಲ್ಲಿಯೇ ಜಿಲ್ಲಾಸ್ಪತ್ರೆ ಇರುವುದರಿಂದ ಸಹಜವಾಗಿ ಕ್ಯಾಂಟೀನ್​ನಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಜಿಲ್ಲಾಡಳಿತ ಪ್ರತಿದಿನ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟವನ್ನು ಕನಿಷ್ಠ 750ರಿಂದ 1 ಸಾವಿರ ಜನರಿಗೆ ನೀಡಿದರೆ ಉತ್ತಮ. ರಾತ್ರಿಯ ಊಟವನ್ನು ಈಗಿನಷ್ಟೇ ಕೊಟ್ಟರೂ ಸಾಕು. ಗ್ರಾಮೀಣ ಪ್ರದೇಶದ ಕಾರ್ವಿುಕರು ರಾತ್ರಿ ಊರಿಗೆ ಹೋಗಿರುತ್ತಾರೆ ಎನ್ನುತ್ತಾರೆ ಕಾರ್ವಿುಕ ಆನಂದ ಹೊಳೆಯಪ್ಪನವರ.

ಯಾವ ದಿನ ಯಾವ ಆಹಾರ ಪದಾರ್ಥ: ಇಂದಿರಾ ಕ್ಯಾಂಟೀನ್​ನಲ್ಲಿ ವಾರದ ಏಳು ದಿನವೂ ಆಹಾರ ಪದಾರ್ಥಗಳಲ್ಲಿ ಬದಲಾವಣೆ ಇದೆ. ಉಪಾಹಾರದಲ್ಲಿ ಇಡ್ಲಿ ಮಾತ್ರ ದಿನವೂ ಇರಲಿದೆ. ಅದರ ಜೊತೆಗೆ ಸೋಮವಾರ ಬೆಳಗ್ಗೆ ಪುಳಿಯೊಗರೆ, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರ್, ಟೊಮ್ಯಾಟೋ ಬಾತ್, ಮಂಗಳವಾರ ಬೆಳಗ್ಗೆ ಖಾರಾಬಾತ್, ಮಧ್ಯಾಹ್ನ ಅನ್ನ, ಸಾಂಬಾರ್, ಚಿತ್ರಾನ್ನ, ಬುಧವಾರ ಬೆಳಗ್ಗೆ ಪೊಂಗಲ್, ಮಧ್ಯಾಹ್ನ ಅನ್ನ, ಸಾಂಬಾರ್, ವಾಂಗಿಬಾತ್, ಗುರುವಾರ ಬೆಳಗ್ಗೆ ರವಾ ಕಿಚಡಿ, ಮಧ್ಯಾಹ್ನ ಅನ್ನ, ಸಾಂಬಾರ್, ಬಿಸಿಬೇಳೆಬಾತ್, ಶುಕ್ರವಾರ ಬೆಳಗ್ಗೆ ಚಿತ್ರಾನ್ನ, ಮಧ್ಯಾಹ್ನ ಅನ್ನ, ಸಾಂಬಾರ್, ಮೆಂತ್ಯೆ ಫಲಾವ್, ಶನಿವಾರ ಬೆಳಗ್ಗೆ ವಾಂಗಿಬಾತ್, ಮಧ್ಯಾಹ್ನ ಅನ್ನಸಾಂಬಾರ್, ಪುಳಿಯೊಗರೆ, ಭಾನುವಾರ ಬೆಳಗ್ಗೆ ಖಾರಾಬಾತ್ ಮತ್ತು ಕೇಸರಿಬಾತ್, ಮಧ್ಯಾಹ್ನ ಅನ್ನ, ಸಾಂಬಾರ್, ಪುಲಾವ್ ಎರಡರಲ್ಲಿ ಒಂದನ್ನು ನೀಡಲಾಗುತ್ತಿದೆ.

ಹಾವೇರಿಯಲ್ಲಿ ಕ್ಯಾಂಟಿನ್ ಆರಂಭದ ದಿನದಿಂದ ಕಾರ್ವಿುಕರು, ವಿದ್ಯಾರ್ಥಿಗಳು ಸೇರಿ ಅನೇಕರು ಬರುತ್ತಿದ್ದಾರೆ. ನಮಗೆ ಸದ್ಯ ಸರ್ಕಾರದಿಂದ 500 ಜನರಿಗೆ ಊಟ, ಉಪಾಹಾರ ನೀಡಲು ಆದೇಶವಿದೆ. ಹೀಗಾಗಿ ನಾವು ಅಷ್ಟೇ ಜನರಿಗೆ ವಿತರಿಸುತ್ತಿದ್ದೇವೆ. ಬೆಳಗಿನ ಹಾಗೂ ಮಧ್ಯಾಹ್ನದ ಊಟಕ್ಕೆ ನಮಗೆ 500ಕ್ಕೂ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಸರದಿಯಲ್ಲಿ ನಿಲ್ಲಿಸಿ 500 ಜನರಿಗೆ ಕೂಪನ್​ಗಳನ್ನು ವಿತರಿಸಿ ಅವರಿಗೆ ಮಾತ್ರ ನೀಡುತ್ತಿದ್ದೇವೆ. ಇನ್ನೂ 250ರಷ್ಟು ಜನರಿಗೆ ಇಲ್ಲಿ ಬೇಡಿಕೆಯಿದೆ.

| ಶೋಯಬ್ ಅಹ್ಮದ್, ಯೋಜನಾ ನಿರ್ದೇಶಕ, ಪ್ರಯಾಸ್ ಕಂಪನಿ

ಬಡವರ ಅನುಕೂಲಕ್ಕಾಗಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್​ಗೆ ಉತ್ತಮ ಸ್ಪಂದನೆ ದೊರೆತಿದೆ. ಬೆಳಗ್ಗಿನ ಉಪಾಹಾರಕ್ಕೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಜನರು ಆಗಮಿಸುತ್ತಿರುವ ಮಾಹಿತಿ ಬಂದಿದೆ. ಇನ್ನಷ್ಟು ಜನರಿಗೆ ವ್ಯವಸ್ಥೆ ಮಾಡುವ ಕುರಿತು ಸರ್ಕಾರದೊಂದಿಗೆ ರ್ಚಚಿಸಿ ಬಡಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.

| ಡಾ. ಎಂ.ವಿ. ವೆಂಕಟೇಶ, ಜಿಲ್ಲಾಧಿಕಾರಿ ಹಾವೇರಿ