ಮಂಗಳೂರು: ಕರಾವಳಿಯಲ್ಲಿ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಲವು ಇಲಾಖೆಗಳನ್ನು ಒಳಗೊಂಡಂತೆ ಮೀನುಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕರಾವಳಿ ಮೀನುಗಾರಿಕಾ ಸಮಗ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್‌ವೇಲ್ ಎ. ತಿಳಿಸಿದರು.
ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಬುಧವಾರ ಮೀನುಗಾರ ಮುಖಂಡರು, ಎನ್‌ಎಂಪಿಟಿ ಅಧಿಕಾರಿಗಳು, ಮೀನುಗಾರಿಕಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಮುಖಂಡರು ಪ್ರಸ್ತಾವಿಸಿದ ವಿಚಾರಗಳಿಗೆ ಉತ್ತರಿಸಿದ ಅವರು, ಕೆಲವು ಸಮಸ್ಯೆಗಳನ್ನು ನಿವಾರಿಸಲು ಮೀನುಗಾರಿಕಾ ಕಾಲೇಜು ಸಹಕರಿಸಲಿದೆ. ಉಳಿದಂತೆ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲು ಪ್ರಾಧಿಕಾರದ ಅಗತ್ಯವಿದೆ. ಜಿಲ್ಲಾಧಿಕಾರಿ, ಎನ್‌ಎಂಪಿಟಿ ಅಧ್ಯಕ್ಷ, ಪರಿಸರ ಇಲಾಖೆ(ಸಿಆರ್‌ಜಡ್) ಕಾರ್ಯದರ್ಶಿ, ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜು ಡೀನ್, ಮೀನುಗಾರಿಕಾ ಮತ್ತು ಅರಣ್ಯ ಇಲಾಖೆ ನಿರ್ದೇಶಕರನ್ನು ಸದಸ್ಯರನ್ನಾಗಿಸಲು ಕೋರಲಾಗುವುದು ಎಂದರು.
ಹೂಳು ತೆರವು ಆಗ್ರಹ: ಬೋಟ್ ದಕ್ಕೆಗೆ ಬರುವಲ್ಲಿ ಪ್ರಮುಖ ಅಡ್ಡಿ ನದಿ ಮತ್ತು ಅಳಿವೆ ಬಾಗಿಲಿನಲ್ಲಿ ತುಂಬಿರುವ ಹೂಳು. ನೇತ್ರಾವತಿ ಸೇತುವೆ ಹಾಗೂ ಕೂಳೂರು ಸೇತುವೆ ಬಳಿಯಿಂದ ಅಳಿವೆವರೆಗೆ ಹೂಳು ತೆಗೆದರೆ ಬೋಟ್‌ಗಳ ಸುಗಮ ಸಂಚಾರ ಸಾಧ್ಯ ಎಂದು ಮೀನುಗಾರ ಮುಖಂಡರಾದ ನಿತಿನ್ ಕುಮಾರ್, ನವೀನ್ ಬಂಗೇರ, ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ನವೀನ್ ಕುಮಾರ್ ಬೆಂಗ್ರೆ ಸಮಸ್ಯೆ ವಿವರಿಸಿದರು. ಹೂಳು ತೆರವಿಗೆ ಸಂಬಂಧಿಸಿ ಮೀನುಗಾರಿಕಾ ಕಾಲೇಜು ಅಧ್ಯಯನ ವರದಿ ಸಿದ್ಧಪಡಿಸಿದ್ದು, ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಾ.ಸೆಂಥಿಲ್‌ವೇಲ್ ತಿಳಿಸಿದರು.
ಎನ್‌ಎಂಪಿಟಿ ನಡೆಗೆ ಅಸಮಾಧಾನ: ಮಳೆಗಾಲದ ತುರ್ತು ಸಂದರ್ಭ ಎನ್‌ಎಂಪಿಟಿ ಪ್ರವೇಶಿಸಲು ಅನುಮತಿ ನಿರಾಕರಿಸುತ್ತಿರುವುದಕ್ಕೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದರು. ಎನ್‌ಎಂಪಿಟಿ ಅಧೀಕ್ಷಕ ಇಂಜಿನಿಯರ್ ಶೇಖರ್ ಕಾಪು, ಭದ್ರತಾ ದೃಷ್ಟಿಯಿಂದ ಸ್ಥಳದಲ್ಲಿರುವ ಭದ್ರತಾ ಪಡೆಯವರು ಅನುಮತಿ ನಿರಾಕರಿಸುತ್ತಾರೆ. ಮೊದಲೇ ಮಾಹಿತಿ ನೀಡಿದರೆ ಒಳಗೆ ಬಿಡಲಾಗುವುದು ಎಂದರು. ಅಧ್ಯಕ್ಷರಿಗೆ ಈ ಕುರಿತಂತೆ ಪತ್ರ ಬರೆಯುವುದಾಗಿ ಡೀನ್ ಡಾ.ಸೆಂಥಿಲ್‌ವೇಲ್ ತಿಳಿಸಿದರು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ಎನ್‌ಎಂಪಿಟಿ ಅಧಿಕಾರಿಗಳಾದ ಶೈಲೇಂದ್ರ ಕುಮಾರ್, ಶೇಖರ್ ನಾಯಕ್ ಉಪಸ್ಥಿತರಿದ್ದರು. ಮಂಗಳೂರು ಹಳೇ ಬಂದರು ಕುರಿತ ಅಧ್ಯಯನ ವರದಿಯನ್ನು ಪ್ರಾಧ್ಯಾಪಕ ಡಾ.ಲಕ್ಷ್ಮೀಪತಿ ಎಂ.ಟಿ ಮಂಡಿಸಿದರು. ಪ್ರಾಧ್ಯಾಪಕಿ ವಂದನಾ ಕೆ. ನಿರೂಪಿಸಿದರು.
ಕುಳಾಯಿ ಬಂದರು ಟೆಂಡರ್ ರದ್ದು: ಕುಳಾಯಿಯಲ್ಲಿ ಎನ್‌ಎಂಪಿಟಿ ಮತ್ತು ಸಾಗರಮಾಲಾ ಯೋಜನೆಯಡಿ ಶೇ.50-50 ಅನುದಾನಲ್ಲಿ 195 ಕೋಟಿ ರೂ. ವೆಚ್ಚದಲ್ಲಿ ಸರ್ವ ಋತು ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ಮೊದಲು ಕರೆಯಲಾದ ಟೆಂಡರ್‌ನಲ್ಲಿ ನಿಗದಿತ ಮೊತ್ತಕ್ಕಿಂತ ಶೇ.70ರಷ್ಟು ಹೆಚ್ಚು ಬಿಡ್ ಸಲ್ಲಿಕೆಯಾದ ಕಾರಣ ರದ್ದುಗೊಂಡಿದೆ. ಎರಡನೇ ಟೆಂಡರ್‌ನಲ್ಲೂ ಶೇ.54ರಷ್ಟು ಹೆಚ್ಚು ಬಿಡ್ ಬಂದಿದೆ. ಇದು ಕೂಡ ರದ್ದಾಗುವ ಸಾಧ್ಯತೆಯಿದೆ. ಎನ್‌ಎಂಪಿಟಿ ಅಧ್ಯಕ್ಷರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಧೀಕ್ಷಕ ಇಂಜಿನಿಯರ್ ಶೇಖರ್ ಕಾಪು ತಿಳಿಸಿದರು.
ಮೀನುಗಾರರ ಆಗ್ರಹ:
– ಮೀನುಗಳನ್ನು ಇಳಿಸಲು ಸುಸಜ್ಜಿತ ಜೆಟ್ಟಿ ಅವಶ್ಯಕತೆ
– ಹಳೇ ಬಂದರಿನ ಅಭಿವೃದ್ಧಿ
– ಕೈಗಾರಿಕೆಗಳಿಂದ ನದಿ, ಸಮುದ್ರ ಸೇರುತ್ತಿರುವ ತ್ಯಾಜ್ಯದಿಂದ ಮೀನು ಸಂತತಿ ನಾಶಕ್ಕೆ ಕ್ರಮ
– ಬಂದರು, ಜಟ್ಟಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ
– ಶೀತಲೀಕರಣ ಘಟಕ ಮತ್ತು ಐಸ್‌ಪ್ಲಾೃಂಟ್ ನಿರ್ಮಾಣ
– ಸಮರ್ಪಕ ಮೀನು ಮಾರುಕಟ್ಟೆ