ಉಳ್ಳಾಗಡ್ಡಿ-ಖಾನಾಪುರ: ಯಮಕನಮರಡಿ ಕ್ಷೇತ್ರದ ಇಸ್ಲಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.2ರಲ್ಲಿನ ಸುಮಾರು ಹತ್ತಾರು ಮನೆಗಳಿಗೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಯನ್ನು 2022-23ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಕಳೆದೆರಡು ವರ್ಷಗಳಿಂದ ಸಮಸ್ಯೆ ಇದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಿತರು ಗಮನ ಹರಿಸುತ್ತಿಲ್ಲ ಎಂದು ವಾರ್ಡ್ ನಂ.2ರ ನಿವಾಸಿ ಸತ್ತೆಪ್ಪ ಪೂಜೇರಿ ದೂರಿದ್ದಾರೆ.
ಕೊಳಚೆ ನೀರಿಗಾದರೂ ಮುಕ್ತಿ ನೀಡಿ: ಪಂಚಾಯತ್ ರಾಜ್ ಇಲಾಖೆ ಲಕ್ಷಾಂತರ ರೂ. ವ್ಯಯಿಸಿ ಸ್ವಚ್ಛಗ್ರಾಮ ಯೋಜನೆಯಡಿ ಕೊಳಚೆ ನಿರ್ಮೂಲನೆಯಂತಹ ಹಲವು ಗ್ರಾಮ ಸ್ವಚ್ಛತಾ ಅಭಿಯಾನ ಅನುಷ್ಠಾನಗೊಳಿಸಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತಾ ಕ್ರಮ ಕೈಗೊಳ್ಳುತ್ತಿದ್ದರೂ ಗ್ರಾಪಂ ವ್ಯಾಪ್ತಿಯಲ್ಲಿನ ದುರ್ಗಾ ಗಲ್ಲಿಯಲ್ಲಿ ನಿತ್ಯವೂ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ರೋಗಗಳನ್ನು ಆಹ್ವಾನಿಸುವಂತಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.