More

    ಬಿಎಚ್ ಸರಣಿ ನಂಬರ್​ಗೆ ಡಿಮಾಂಡ್! ಯಾವ ರಾಜ್ಯಕ್ಕೆ ಹೋದರೂ ವಾಹನ ಸಂಖ್ಯೆ ಒಂದೇ; ರಾಜ್ಯದಲ್ಲಿ 4700 ನೋಂದಣಿ

    | ಕೀರ್ತಿನಾರಾಯಣ ಸಿ. ಬೆಂಗಳೂರು
    ಖಾಸಗಿ ವಾಹನ ಹೊಂದಿರುವವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರುನೋಂದಣಿ ಮಾಡಿಸುವ ತಲೆನೋವು ನಿವಾರಣೆಗಾಗಿ ಜಾರಿಗೆ ತಂದಿರುವ ಬಿಎಚ್ (ಭಾರತ್ ಸೀರೀಸ್) ನೋಂದಣಿ ಸಂಖ್ಯೆಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಖಾಸಗಿ ವಾಹನಗಳ ಜತೆಗೆ ವಾಣಿಜ್ಯ ಬಳಕೆಯ ಲಕ್ಸುರಿ, ಕಾರುಗಳು, ಬಸ್​ಗಳು ಹಾಗೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ‘ನೋಂದಣಿ’ಗೂ ಬಿಎಚ್ ನೋಂದಣಿ ಸಂಖ್ಯೆ ಕೊಡಬೇಕು ಎಂಬ ಕೂಗು ಕೇಳಿಬಂದಿದೆ.

    ಬಿಎಚ್ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ಯಾವುದೇ ರಾಜ್ಯಕ್ಕೆ ಹೋದರೂ ಮರುನೋಂದಣಿ ಅಗತ್ಯವಿಲ್ಲ. 2021ರ ಸೆ.1ರಿಂದ 2022ರ ಡಿ.5ರವರೆಗೆ ದೇಶಾದ್ಯಂತ 49,696 ಖಾಸಗಿ ವಾಹನಗಳಿಗೆ ಬಿಎಚ್ ನಂಬರ್ ವಿತರಿಸಲಾಗಿದೆ. ಕರ್ನಾಟಕದಲ್ಲಿ 4,714 ವಾಹನಗಳಿಗೆ ಕೊಡಲಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 13,625 ವಾಹನಗಳು ಈ ನೋಂದಣಿ ಸಂಖ್ಯೆ ಪಡೆದಿವೆ.

    ಭಾರತ್ ಸೀರೀಸ್​ನಡಿ ನೋಂದಣಿ ಸಂಖ್ಯೆ ಪ್ರಸ್ತುತ ಖಾಸಗಿ ಬಳಕೆಯ ವಾಹನಗಳಿಗೆ ಸೀಮಿತವಾಗಿದೆ. ಈ ಸಂಖ್ಯೆ ಪಡೆಯಲು 10 ಲಕ್ಷ ರೂ. ವರೆಗಿನ ಬೆಲೆಯ ವಾಹನಕ್ಕೆ ಶೇ.8ರಷ್ಟು, 10 -20 ಲಕ್ಷ ರೂ. ವಾಹನಕ್ಕೆ ಶೇ.10 ಹಾಗೂ 20 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ವಾಹನಕ್ಕೆ ಶೇ.12 ತೆರಿಗೆ ಪಾವತಿಸಬೇಕು. ಎಲೆಕ್ಟ್ರಿಕ್ ವಾಹನಕ್ಕೆ ಶೇ.2 ಕಡಿಮೆ ತೆರಿಗೆ ನಿಗದಿ ಪಡಿಸಲಾಗಿದೆ. ಕಾರು ಮಾಲೀಕರಿಗೆ ಬಿಎಚ್ ಸರಣಿಯಲ್ಲಿ ಎರಡು ವರ್ಷದ ಅವಧಿಗೆ ಅಥವಾ ನಾಲ್ಕು, ಆರು, ಎಂಟು ವರ್ಷ… ಹೀಗೆ ಹಲವು ಸ್ಲ್ಯಾಬ್​ಗಳಲ್ಲಿ ರಸ್ತೆ ತೆರಿಗೆ ಪಾವತಿಸಬಹುದು. ರಾಜ್ಯ, ಕೇಂದ್ರ ಸರ್ಕಾರಿ ನೌಕರರಿಗೆ, ಸೇನಾಪಡೆಗಳ ಸಿಬ್ಬಂದಿಗೆ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ನೌಕರರಿಗೆ, ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕರರಿಗೆ ಮಾತ್ರ ಬಿಎಚ್ ಸೀರೀಸ್​ನಡಿ ತಮ್ಮ ಖಾಸಗಿ ವಾಹನವನ್ನು ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಇದೆ.

    ರಾಜ್ಯದ ಆದಾಯ ಖೋತಾ: ಬಿಎಚ್ ಸಿರೀಸ್ ಸಂಖ್ಯೆಯನ್ನು ಲಕ್ಸುರಿ ಕಾರುಗಳು, ಬಸ್​ಗಳು ಹಾಗೂ ಐಷಾರಾಮಿ ಕಾರುಗಳ ‘ನೋಂದಣಿ’ಗೂ ಕೊಟ್ಟರೆ ಸರ್ಕಾರಕ್ಕೆ ನೂರಾರು ಕೋಟಿ ರೂ. ಆದಾಯ ಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆರ್​ಟಿಒ ಅಧಿಕಾರಿಗಳ ಪ್ರಕಾರ ಕರ್ನಾಟಕದಲ್ಲಿ ರಸ್ತೆಗಿಳಿಯುವ ಹೈಎಂಡ್ ಕಾರುಗಳು ಹಾಗೂ ಖಾಸಗಿ ಬಸ್​ಗಳ ಪೈಕಿ ಶೇ.30ರಿಂದ ಶೇ.40 ವಾಹನಗಳು ಹೊರರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗುತ್ತಿವೆ. ರಾಜ್ಯದಲ್ಲಿ ರಸ್ತೆ ತೆರಿಗೆ ಮೊತ್ತ ಸಿಕ್ಕಾಪಟ್ಟೆ ಜಾಸ್ತಿ ಇರುವುದರಿಂದ ಅನ್ಯ ರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ತೆರಿಗೆ ದುಡ್ಡು ಪರರಾಜ್ಯಗಳ ಖಜಾನೆ ಸೇರುತ್ತಿದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಕನಿಷ್ಠ ಶೇ.13ರಿಂದ ಗರಿಷ್ಠ ಶೇ.20ರಷ್ಟು ಇದೆ. ಅರುಣಾಚಲಪ್ರದೇಶ, ರಾಜಸ್ಥಾನ, ಪುದುಚೇರಿ, ಗುಜರಾತ್, ನಾಗಾಲ್ಯಾಂಡ್, ಮಹಾರಾಷ್ಟ್ರ ಸೇರಿ ಇನ್ನಿತರ ರಾಜ್ಯಗಳಲ್ಲಿ ಅತಿ ಕಡಿಮೆ ಅಂದರೆ ಶೇ.6, ಶೇ.8 ಹಾಗೂ ಶೇ.10ರಷ್ಟು ಇದೆ. ಹೀಗಾಗಿ ಬೇರೆ ರಾಜ್ಯಗಳಲ್ಲಿ ವಾಹನಗಳ ರಿಜಿಸ್ಟ್ರೇಷನ್ ಮಾಡಿಸಿ, ರಾಜ್ಯದಲ್ಲಿ ಸಂಚಾರ ನಡೆಸಲಾಗುತ್ತಿದೆ. ಹೀಗಾಗಿ ಇಡೀ ದೇಶಕ್ಕೆ ಅನ್ವಯಿಸುವ ಭಾರತ್ ಸೀರೀಸ್ ನಂಬರ್ ಕೊಟ್ಟರೆ ಸೂಕ್ತ ಎಂದು ತಜ್ಞರು ಹೇಳುತ್ತಿದ್ದಾರೆ.

    ಈಗಿರುವ ನಿಯಮ ಏನು?: ಈಗಿರುವ ನಿಯಮಗಳ ಪ್ರಕಾರ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನವನ್ನು ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಿ ಮರು ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೇ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರವಾದಾಗ ಹೊಸದಾಗಿ ರಸ್ತೆ ತೆರಿಗೆ ಕಟ್ಟಬೇಕು. ಆದರೆ, ಬಿಎಚ್ ಸರಣಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಮರುನೋಂದಣಿ ಸಮಸ್ಯೆ ಇರುವುದಿಲ್ಲ.

    ನಂಬರ್ ಪಡೆಯುವುದು ಹೇಗೆ?: ಸರ್ಕಾರಿ ನೌಕರರಾಗಿದ್ದರೆ ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಕಚೇರಿ ಗುರುತಿನ ಚೀಟಿ ಕೊಟ್ಟರೆ ಸಾಕು. ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದರೆ ಸೇವಾ ದೃಢೀಕರಣ ಪತ್ರ ಒದಗಿಸಬೇಕು. 4 ರಾಜ್ಯಗಳಲ್ಲಿ ಕಚೇರಿಗಳಿರುವ ಬಗ್ಗೆಯೂ ಪ್ರಮಾಣಪತ್ರ ಒದಗಿಸಬೇಕು.

    ಹಳೇ ನಂಬರ್ ಬದಲಾವಣೆಗೂ ಅವಕಾಶ: ಪ್ರಸ್ತುತ ಹೊಸ ವಾಹನಗಳ ನೋಂದಣಿಗೆ ಮಾತ್ರ ಬಿಎಚ್ ಸೀರೀಸ್ ಸಂಖ್ಯೆ ಕೊಡಲಾಗುತ್ತಿದೆ. ಆದರೆ, 2022ರ ಅಕ್ಟೋಬರ್ 4ರಂದು ನಿಯಮಾವಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ಕರಡು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ಈಗಾಗಲೇ ನೋಂದಣಿಯಾಗಿರುವ ಸಂಖ್ಯೆಯನ್ನು ನಿಗದಿತ ತೆರಿಗೆಯನ್ನು ಪಾವತಿಸಿ ಬಿಎಚ್ ಸೀರೀಸ್ ಸಂಖ್ಯೆಗೆ ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.

    ಪ್ರತಿನಿತ್ಯ 1,600 ವಾಹನ ನೋಂದಣಿ: ಹೊರರಾಜ್ಯಗಳಲ್ಲಿ ನೋಂದಣಿಯಾಗುವ ವಾಹನಗಳನ್ನು ಬಿಟ್ಟು ಬೆಂಗಳೂರಿನಲ್ಲಿ ವಾಣಿಜ್ಯ ಹಾಗೂ ಖಾಸಗಿ ಬಳಕೆಯ ಸರಾಸರಿ 1,100 ದ್ವಿಚಕ್ರ ವಾಹನ, 300 ಕಾರುಗಳು ಸೇರಿ ಪ್ರತಿನಿತ್ಯ 1,600 ಹೊಸ ವಾಹನಗಳು ನೋಂದಣಿಯಾಗುತ್ತಿವೆ ಎಂಬ ಮಾಹಿತಿ ಇದೆ.

    ವಾಣಿಜ್ಯ ಬಳಕೆಯ ವಾಹನ ಗಳಿಗೂ ಬಿಎಚ್ ಸರಣಿಯ ನಂಬರ್ ಕೊಡಬೇಕು. ರೆಂಟ್ ಎ ಕಾರ್​ನಂತಹ ಲಕ್ಸುರಿ ಕಾರುಗಳ ಕಂಪನಿಗಳು ನಾಲ್ಕೈದು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿವೆ. ಬಿಎಚ್ ನೋಂದಣಿ ಸಂಖ್ಯೆ ಕೊಟ್ಟರೆ ಅನುಕೂಲವಾಗುತ್ತದೆ. ಹೊಸ ವ್ಯವಸ್ಥೆಯಿಂದ ತೆರಿಗೆ ಸೋರಿಕೆ ಸೇರಿ ಹಲವು ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
    | ಕೆ. ರಾಧಾಕೃಷ್ಣ ಹೊಳ್ಳ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ

    ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್​ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts