ಇಂಡಿ: ತಾಲೂಕಿನ ಪಡನೂರ ಗ್ರಾಮದ ಬಳಿಯ ರೈಲು ನಿಲ್ದಾಣದಲ್ಲಿ ಸೊಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ನಿತ್ಯ ನಿಲುಗಡೆ ಪುನರಾರಂಭ ಮಾಡಬೇಕೆಂದು ಈ ಭಾಗದ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ದಿನ ನಿತ್ಯ ಸೊಲ್ಲಾಪುರದಿಂದ ಹುಬ್ಬಳ್ಳಿಗೆ ಬೆಳಗ್ಗೆ 5.32ಕ್ಕೆ ಸಂಚರಿಸುವ ಪ್ಯಾಸೆಂಜರ್ ರೈಲು ನಿತ್ಯ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲುತ್ತಿತ್ತು. ಅಲ್ಲದೆ, ಹುಬ್ಬಳ್ಳಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದ ರೈಲೂ ಸಹ ರಾತ್ರಿ 9.50ಕ್ಕೆ 1 ನಿಮಿಷ ನಿಲುಗಡೆಯಗುತ್ತಿತ್ತು. ಇದರಿಂದ ಗ್ರಾಮ ಸೇರಿ ಸುತ್ತಮುತ್ತಲಿನವರಿಗೆ ಅನುಕೂಲವಾಗಿತ್ತು. ನೌಕರರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು ನಿತ್ಯ ಇಲ್ಲಿನ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದು ದೂರದ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರು. ಆದರೆ ವಾರದಿಂದ ಈ ಎರಡೂ ರೈಲುಗಳ ನಿಲುಗಡೆಯನ್ನು ಸಂಬಂಧಿಸಿದ ರೈಲು ಇಲಾಖೆ ರದ್ದು ಪಡಿಸಿದ್ದು ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಉಳಿದ ಹೈದರಾಬಾದ್, ರಾಯಚೂರು ಪ್ಯಾಸೆಂಜರ್, ಡೆಮೊ ಸೇರಿ ಎಲ್ಲ ಪ್ಯಾಸೆಂಜರ್ ರೈಲುಗಳು ನಿತ್ಯ ನಿಲ್ಲುತ್ತವೆ. ಆದರೆ, ಸೊಲ್ಹಾಪುರ- ಹುಬ್ಬಳ್ಳಿ ರೈಲು ನಿಲುಗಡೆಯಾಗದಿರುವುದು ಇಲ್ಲಿನ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸ್ಥಳೀಯ ನಿವಾಸಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೂ ಪ್ರಯಾಣಿಕರು ಮನವಿ ಸಲ್ಲಿಸಿದ್ದಾರೆ.
ಕೂಡಲೇ ಸಂಬಂಧಿಸಿದ ರೈಲು ಇಲಾಖೆಯವರು ಎಂದಿನಂದತೆ ಹುಬ್ಬಳ್ಳಿ- ಸೊಲ್ಲಾಪುರ ಮತ್ತು ಸೊಲ್ಲಾಪುರ-ಹುಬ್ಬಳ್ಳಿ ರೈಲುಗಳನ್ನು ಗ್ರಾಮದ ನಿಲ್ದಾಣದಲ್ಲಿ ನಿಲ್ಲಗಡೆ ಮಾಡಲು ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ ಎಂಬುದು ಪಡನೂರ ಗ್ರಾಮದ ತಾಪಂ ಮಾಜಿ ಸದಸ್ಯ ಕಲ್ಲನಗೌಡ ಬಿರಾದಾ, ಪಂಚಪ್ಪ ಅರವತ್ತು, ಸ್ಥಳೀಯ ಗ್ರಾಪಂ ಸದಸ್ಯ ಗೇಣು ಗಿರಣಿವಡ್ಡರ, ನಿವೃತ್ತ ಶಿಕ್ಷಕ ಸಂಗಣ್ಣ ಭೈರಜಿ ಮತ್ತಿರರ ಆಶಯವಾಗಿದೆ.
