ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತರ ಪ್ರತಿಭಟನೆ

ಬೆಳಗಾವಿ: ಬೆಳೆಸಾಲ ಮನ್ನಾ,ಪಡಿತರ ಚೀಟಿಗೆ ತೆಗೆದುಕೊಳ್ಳುವ ಹೆಬ್ಬೆಟ್ಟನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಧಾನ್ಯಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ. ಆಹಾರ ಧಾನ್ಯಗಳಿಗಾಗಿ ಕೂಲಿ ಕಾರ್ಮಿಕರು, ಬಡವರು ನಾಲ್ಕು ದಿನಗಳವರೆಗೆ ಕಾಯಬೇಕು. ಮತ್ತೊಂದೆಡೆ ಹೆಬ್ಬೆಟ್ಟಿನ ಸಮಸ್ಯೆ ಮುಂದಿಟ್ಟುಕೊಂಡು ಪಡಿತರ ಅಂಗಡಿಕಾರರು ಧಾನ್ಯಗಳನ್ನು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಡಿತರ ಧಾನ್ಯ ವಿತರಣೆಗೆ ಹೆಬ್ಬೆಟ್ಟು ವ್ಯವಸ್ಥೆ ರದ್ದು ಪಡಿಸಬೇಕು. ಜತೆಗೆ ಸರ್ವರ್ ಸಮಸ್ಯೆ ಸರಿ ಪಡಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ರಾಜ್ಯ ಸರ್ಕಾರವು ಸೊಸೈಟಿಗಳಲ್ಲಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಕೇವಲ 10 ಸಾವಿರ ರೂ. ಮಾತ್ರ ಮನ್ನಾ ಆಗಿದೆ ಎಂದು ಹೇಳುತ್ತಿದ್ದಾರೆ. ಬಾಕಿ ಉಳಿದಿರುವ ಬೆಳೆಸಾಲ ಮನ್ನಾ ಮಾಡಲು ಬರುವುದಿಲ್ಲ. ಸಾಲ ಮರುಪಾವತಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ಬಸವರಾಜ ಕೆ. ಪಾಟೀಲ, ಬಸವರಾಜ ಶಿ.ನಾವಿ, ಕಲಗೌಡ ಪಾಟೀಲ ಸೇರಿದಂತೆ ರೈತರು ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *