ಚಿಕ್ಕಮಗಳೂರು: ಮೈಸೂರು ಮೂಡದ ಸಾವಿರಾರು ಕೋಟಿ ರೂ ಅಕ್ರಮಕ್ಕೆ ಸಂಬಂಧಪಟ್ಟಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಇದು ಎಸ್‌ಪಿ ವಿರುದ್ಧ ಒಬ್ಬ ಕಾನ್ಸ್ಟೇಬಲ್ ತನಗೆ ಮಾಡಿದಂತಾಗುತ್ತದೆ. ಒಬ್ಬ ಸಿಎಂ ವಿರುದ್ಧ ಎಸ್ ಐಟಿ ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೂಡ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯೇ ನೇರವಾಗಿ ಭಾಗಿಯಾಗಿದ್ದಾರೆ. ಮೂಡದಿಂದ ಒಮ್ಮೆ ನೋಟಿಫಿಕೇಶನ್ ಆದ ಜಾಗವನ್ನು ಖರೀದಿಸುವುದೇ ಅಪರಾಧ. ಆದರೆ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಬುದ್ಧಿವಂತಿಕೆಯಿಂದ ಕೂಡಿದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಾದಿತ ಜಾಗವನ್ನು 1992ರಲ್ಲಿ ಮೂಡ ಸ್ವಾಧೀನ ಪಡಿಸಿಕೊಂಡಿತ್ತು ಜೊತೆಗೆ ಆ ಜಾಗಕ್ಕೆ ಕೋರ್ಟಿಗೆ ಹಣವನ್ನು ಜಮಾ ಮಾಡಿದ್ದರು. ಬಳಿಕ ಈ ಜಮೀನನ್ನು ಸಿಎಂ ಸಿದ್ದರಾಮಯ್ಯ ಅವರ ಬಾಮೈದ ಖರೀದಿ ಮಾಡಿದ್ದರು. ಸ್ವಾಧೀನ ಪಡಿಸಿಕೊಂಡ ಜಮೀನನ್ನು ಖಾಸಗಿ ವ್ಯಕ್ತಿಗಳು ಖರೀದಿ ಮಾಡುವುದು ಅಪರಾಧ. ಇದರ ಮಧ್ಯೆ 1998ರಲ್ಲಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲಿ ವಿವಾದಿತ ಜಾಗವನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ ಎಂದು ಹೇಳಿದ್ದರು. ಆದರೆ ಮೂಡ ದಾಖಲೆಗಳಲ್ಲಿ ಸದರಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿಲ್ಲ ಎಂದಿದೆ. ಹೀಗಿದ್ದರೂ 2019ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಾಮೈದ ಆ ಜಮೀನನ್ನು ಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿಣ ಕುಂಕುಮಕ್ಕೆಂದು ದಾನ ನೀಡಿದ್ದಾರೆ. ಹೀಗೆ ಅಕ್ರಮವಾಗಿ ಜಮೀನನ್ನು ಸಿಎಂ ಕುಟುಂಬ ಪಡೆದುಕೊಂಡಿದೆ ಎಂದು ಆರೋಪಿಸಿದರು.
2013ರ ಚುನಾವಣೆಯ ಅಫೀಡವಿಟ್ ನಲ್ಲಿ ಸಿದ್ದರಾಮಯ್ಯ ಅವರು ಈ ಜಮೀನನ್ನು ಉಲ್ಲೇಖ ಮಾಡಿಲ್ಲ. 2018 ರ ಚುನಾವಣೆಯ ಅಫಿಡವಿಟ್ ನಲ್ಲಿ ಜಮೀನನ್ನು ಉಲ್ಲೇಖ ಮಾಡಲಾಗಿದ್ದರೂ ಮೌಲ್ಯವನ್ನು ಕೇವಲ 25 ಲಕ್ಷ ರೂ ತೋರಿಸಿದ್ದರು. ಏರ್ಪೋರ್ಟ್ 23ರ ಚುನಾವಣೆಯಲ್ಲಿ ಜಮೀನಿನ ಮೌಲ್ಯ ಎಂಟು ಕೋಟಿ ಎಂದು ತೋರಿಸಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಅವರು ಆ ಜಮೀನಿಗೆ 60 ಕೋಟಿ ಪರಿಹಾರ ನೀಡಿ ಜಮೀನು ನೀಡುತ್ತೇನೆ ಎನ್ನುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸಿಎಂ ಉತ್ತರ ಪ್ರಾಮಾಣಿಕವಾದುದಲ್ಲ. ಬದಲಿಗೆ ಭ್ರಷ್ಟಾಚಾರವನ್ನು ಬಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ನಾಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ವಕ್ತಾರ ಸೋಮಶೇಖರ್ ಉಪಸ್ಥಿತರಿದ್ದರು.