ಬಾಳೆ ಎಲೆಗೆ ಬೇಡಿಕೆ ದ್ವಿಗುಣ

ಭರತ್ ಶೆಟ್ಟಿಗಾರ್ ಮಂಗಳೂರು

ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಬಾಳೆ ಎಲೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬಾರಿ ಬೇಸಿಗೆ ಅತ್ಯಂದ ವೇಳೆಗೆ ಬೇಡಿಕೆ ದ್ವಿಗುಣವಾಗಿದ್ದು, ನೀರಿಗೆ ಸಮಸ್ಯೆಯಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು.

ರೇಷನಿಂಗ್‌ನಿಂದಾಗಿ ನೀರು ಸಮಸ್ಯೆ ಆರಂಭವಾದಂದಿನಿಂದ ಪ್ರತಿಯೊಂದು ಉದ್ಯಮಕ್ಕೂ ಹೊಡೆತ ತಟ್ಟಿದೆ. ಸ್ವಂತ ನೀರಿನ ಮೂಲವಿಲ್ಲದೆ ಪಾಲಿಕೆ ನೀರನ್ನೇ ನೆಚ್ಚಿಕೊಂಡಿರುವ ಹೋಟೆಲ್‌ಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಸ್ಟೀಲ್ ಪ್ಲೇಟ್, ಲೋಟಗಳ ಬದಲು ಪೇಪರ್ ಪ್ಲೇಟ್, ಲೋಟಗಳಿಗೆ ಮೊರೆ ಹೋಗಲಾಗಿತ್ತು. ಪ್ರಸ್ತುತ ಊಟಕ್ಕೆ ಬಟ್ಟಲಿನ ಬದಲು ಬಾಳೆ ಎಲೆ ಬಳಕೆ ಮಾಡಲಾಗುತ್ತದೆ. ಪರಿಣಾಮ ಮಾರುಕಟ್ಟೆಯಲ್ಲಿ ಬಾಳೆ ಎಲೆಗೆ ಬೇಡಿಕೆ ಹೆಚ್ಚಾಗಿದೆ.

ಶುಭ ಕಾರ್ಯಕ್ರಮಗಳು ನಡೆಯುವ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಬಾಳೆ ಎಲೆಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಈ ಬಾರಿ ಮಾತ್ರ ಬೇಡಿಕೆ ದ್ವಿಗುಣವಾಗಿದೆ. ಹೋಟೆಲ್‌ಗಳಿಗೆ ಹಿಂದಿಗಿಂತ ಎರಡರಷ್ಟು ಪೂರೈಕೆಯಾಗುತ್ತಿದೆ. ಪಾರ್ಸಲ್‌ಗಳಿಗೆ ಮಾತ್ರ ಬಾಳೆ ಎಲೆ ಉಪಯೋಗಿಸುತ್ತಿದ್ದ ಹೋಟೆಲ್‌ನವರು ಪ್ರಸ್ತುತ ಊಟಕ್ಕೆ, ಚಿಕನ್, ಮೀನು, ಮಾಂಸ, ಬಿರಿಯಾನಿ ಮೊದಲಾದ ಎಣ್ಣೆಯ ಅಂಶ ಹೊಂದಿರುವ ಐಟಂಗಳ ಸಫ್ಲೈ ವೇಳೆ ಪ್ಲೇಟ್ ಮೇಲೆ ಬಾಳೆ ಎಲೆ ಉಪಯೋಗಿಸುತ್ತಿದ್ದಾರೆ. ಇದರಿಂದ ಜಿಡ್ಡಿನಾಂಶ ಪ್ಲೇಟ್‌ಗೆ ತಾಗುವುದಿಲ್ಲ. ಕಡಿಮೆ ನೀರಿನಲ್ಲಿ ಪ್ಲೇಟ್ ತೋಳೆಯಬಹುದು ಎನ್ನುತ್ತಾರೆ ಹೋಟೆಲ್ ಮಾಲೀಕರು.

ಬೆಲೆಯಲ್ಲಿ ಆಗಿಲ್ಲ ಹೆಚ್ಚಳ: ಬೇಡಿಕೆ ಹೆಚ್ಚಾದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರಕ್ಕೆ ಸ್ಥಳೀಯವಾಗಿ ಪುತ್ತೂರು, ಸುಳ್ಯ, ವಿಟ್ಲ ಭಾಗದಿಂದ ಎಲೆ ಬರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿಯೂ ನೀರಿಗೆ ಸಮಸ್ಯೆಯಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ತಮಿಳುನಾಡಿನ ಸೇಲಂನಿಂದಲೂ ಮಂಗಳೂರು ಮಾರುಕಟ್ಟೆಗೆ ಬಾಳೆ ಎಲೆ ಪೂರೈಕೆಯಾಗುತ್ತದೆ. ಸ್ಥಳೀಯ ಬಾಳೆ ಎಲೆಗಳಿಗೆ ಹೋಲ್‌ಸೇಲ್ ದರ ಎಲೆಯೊಂದಕ್ಕೆ 2.70 ರೂ., ಚಿಲ್ಲರೆ ಮಾರಾಟ ದರ 3 ರೂ. ಸೇಲಂ ಬಾಳೆ ಎಲೆ ಒಂದು ಸಾವಿರಕ್ಕೆ ಹೋಲ್‌ಸೇಲ್ ದರ 1,400 ರೂ. ಇದ್ದರೆ, ಚಿಲ್ಲರೆ ದರ 1,500 ರಿಂದ 1,600 ರೂ.

ಟೇಬಲ್ ಊಟಕ್ಕೆ ಆದ್ಯತೆ
ಕಾರ್ಯಕ್ರಮಗಳಲ್ಲಿಯೂ ಬಫೆ ಊಟದ ಬದಲು ಟೇಬಲ್ ಊಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕ್ಯಾಟರಿಂಗ್ ಸಂಸ್ಥೆಗಳೂ ಸ್ಥಳಾವಕಾಶ ಇರುವಲ್ಲಿ ಕಾರ್ಯಕ್ರಮ ಆಯೋಜಕರ ಮನವೊಲಿಸಿ ಬಾಲೆ ಎಲೆ ಊಟಕ್ಕೆ ವ್ಯವಸ್ಥೆ ಮಾಡುತ್ತಿದೆ. ಊಟ ಮಾಡಿದ ತಟ್ಟೆಗಳನ್ನು ತೊಳೆಯಲು ಸಾಕಷ್ಟು ನೀರು ವ್ಯರ್ಥವಾಗುವುದರಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಆದರೆ ಬಾಲೆ ಎಲೆ ಸ್ವಲ್ಪ ದುಬಾರಿ ಎನ್ನುತ್ತಾರೆ ಕ್ಯಾಟರಿಂಗ್ ಸಂಸ್ಥೆಯೊಂದರ ಮಾಲೀಕರು.

ಪ್ರತಿ ವರ್ಷ ಬೇಸಿಗೆಯಲ್ಲಿ ಬಾಳೆಎಲೆಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಪ್ರಸ್ತುತ ನೀರು ಕೂಡ ಕಡಿಮೆಯಾಗಿರುವುದರಿಂದ ಕಾರ್ಯಕ್ರಮಗಳ ಊಟಕ್ಕೆ ಬಾಳೆ ಎಲೆಯನ್ನೇ ಬಳಸುತ್ತಿದ್ದಾರೆ. ಹೋಟೆಲ್‌ಗಳಿಗೂ ಈ ಹಿಂದಿಗಿಂತ ಎರಡರಷ್ಟು ಪೂರೈಕೆ ಮಾಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಮೂರು ಅಂಗಡಿಗಳಿದ್ದು, ಎಲ್ಲ ಕಡೆ ಇದೆ ರೀತಿಯ ವ್ಯವಹಾರವಿದೆ.
ಡಿ.ಅಶೋಕ್, ಬಾಳೆ ಎಲೆ ಹೋಲ್‌ಸೇಲ್ ಮಾರಾಟಗಾರರು, ಸೆಂಟ್ರಲ್ ಮಾರ್ಕೆಟ್

ನೀರು ಕಡಿಮೆಯಾಗಿರುವುರಿಂದ ಇದೇ ಮೊದಲ ಬಾರಿಗೆ ಕ್ಯಾಟರಿಂಗ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ದಿನಕ್ಕೆ 3ಸಾವಿರ ರೂ. ಟ್ಯಾಂಕರ್‌ಗೆ ವ್ಯಯಿಸಬೇಕಾಗಿದೆ. ಪರ್ಯಾಯ ಮಾರ್ಗವಾಗಿ ಸ್ಥಳಾವಕಾಶವಿದ್ದಲ್ಲಿ ಬಾಳೆ ಎಲೆ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಅಶ್ವತ್ಥಾಮ ಹೆಗಡೆ, ಮಾಲೀಕರು, ತುಳುನಾಡು ಕ್ಯಾಟರಿಂಗ್

Leave a Reply

Your email address will not be published. Required fields are marked *