Delivery Agent: ದೇಶದಲ್ಲಿ ಆನ್ಲೈನ್ ಮಾರುಕಟ್ಟೆ ಬಹಳ ವೇಗವಾಗಿ ಸಾಗುತ್ತಿದ್ದು, ಫುಡ್ ಡೆಲಿವರಿ ಕೂಡ ಅಷ್ಟೇ ವೇಗದಲ್ಲಿ ಜನರ ಮನೆಯ ಬಾಗಿಲನ್ನು ತಲುಪುತ್ತಿದೆ. ತಾವು ಕುಳಿತ ಜಾಗದಲ್ಲೇ ತಮಿಷ್ಟದ ಆಹಾರವನ್ನು ನೆಚ್ಚಿನ ರೆಸ್ಟೋರೆಂಟ್ನಿಂದ ಆರ್ಡರ್ ಮಾಡುವ ಜನರಿಗೆ ಅದನ್ನು ನಿಗದಿತ ಸಮಯದೊಳಗೆ ತಲುಪಿಸುವ ಸವಾಲಿನ ಕೆಲಸ ಆಯಾ ಪುಡ್ ಡೆಲಿವರಿ ಸಂಸ್ಥೆಯ ಡೆಲಿವರಿ ಏಜೆಂಟ್ಗಳ ಜವಾಬ್ದಾರಿ. ಒಬ್ಬರಿಗೆ ಊಟ ಬರುತ್ತಿದೆ ಎಂಬ ಖುಷಿ, ಮತ್ತೊಬ್ಬರಿಗೆ ಊಟದ ಆರ್ಡರ್ ತಲುಪಿಸುವ ವೇಳೆ ಎದುರಾಗುವ ಸಮಸ್ಯೆಗಳಿಂದ ಬೇಸರ.
ಇದನ್ನೂ ಓದಿ: ಬಾಗಿಲು ತೆರೆದಿದೆ, ಒಳಗೆ ಬರಬೇಕಷ್ಟೇ! ಮೈತ್ರಿ ಮುನ್ಸೂಚನೆ ಕೊಟ್ಟ ಲಾಲು? ಓಪನ್ ಆಫರ್ಗೆ ನಿತೀಶ್ ಪ್ರತಿಕ್ರಿಯೆ | Lalu
ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಕೆಲಸ ನಂಬಿ ಇಂದು ಅನೇಕ ಯುವಕ-ಯುವತಿಯರು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಇದನ್ನೇ ಖಾಯಂ ಕೆಲಸವನ್ನಾಗಿ ಮಾಡಿಕೊಂಡರೆ, ಇನ್ನೂ ಕೆಲವರು ಇದನ್ನು ಪಾರ್ಟ್ ಟೈಮ್ ಜಾಬ್ ಆಗಿ ಮಾಡುತ್ತಿದ್ದಾರೆ. ಬಹುತೇಕ ಡೆಲಿವರಿ ಏಜೆಂಟ್ಗಳು ಬೇರೊಂದು ಕೆಲಸ ನಿರ್ವಹಿಸುತ, ಶಿಕ್ಷಣ ಪೂರೈಸುತ ಇಂತಹ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅದರಲ್ಲೂ ಫುಡ್ ಡೆಲಿವರಿ ಏಜೆಂಟ್ಗಳು ಎದುರಿಸುವ ಸಂಕಷ್ಟಗಳು ಒಂದೆರೆಡಲ್ಲ.
ವಿದ್ಯಾಭ್ಯಾಸದ ಜತೆ ಜತೆಗೆ ಡೆಲಿವರಿ
ಫುಡ್ ಡೆಲಿವರಿ ವೇಳೆ ಹಲವು ರೀತಿಯ ಅವಮಾನ, ಅಪಹಾಸ್ಯ, ಬೇಸರ, ಕೆಟ್ಟ ಪರಿಸ್ಥಿತಿಗಳು, ಕಠಿಣ ಸವಾಲುಗಳನ್ನು ಎದುರಿಸುವ ಡೆಲಿವರಿ ಏಜೆಂಟ್ಗಳ ಮಧ್ಯೆ ಇಲ್ಲೊಬ್ಬಳು ಯುವತಿ, ನಮ್ಮಂತಹ ಉದ್ಯೋಗಿಗಳು ಎದುರಿಸುವ ಸವಾಲು ಇದು ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ತನ್ನ ವಿದ್ಯಾಭ್ಯಾಸದ ಜತೆ ಜತೆಗೆ ಸ್ವಿಗ್ಗಿ ಡೆಲಿವರಿ ಹುಡುಗಿಯಾಗಿ ಕೆಲಸ ನಿಭಾಯಿಸುತ್ತಿರುವ ಅಮ್ರಿತಾ, ಮಾಲ್ಗಳಿಂದ ಫುಡ್ ಆರ್ಡರ್ ಮಾಡುವವರಿಗೆ ತಾವು ಅನುಭವಿಸುವ ಕಷ್ಟವೇನು ಎಂಬುದನ್ನು ಈ ರೀಲ್ ಮೂಲಕ ಹೇಳಿದ್ದಾರೆ.
“ದೊಡ್ಡ ದೊಡ್ಡ ಮಾಲ್ಗಳಿಂದ ಫುಡ್ ಆರ್ಡರ್ ಮಾಡುವ ಜನರಿಗೆ ಊಟ ತಲುಪಿಸಲು ಇಲ್ಲಿಗೆ ಬರುವ ನಮಗೆ ಇದೇ ದೊಡ್ಡ ತಲೆನೋವು. ಮೊದಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯಿರುವ ಕಡೆಯೇ ಬೈಕ್ ನಿಲ್ಲಿಸಬೇಕು. ಆನಂತರ ಓಡಿ ಹೋಗಿ ಲಿಫ್ಟ್ನಲ್ಲಿ ಜಾಗ ಪಡೆದು, ಫುಡ್ ಕೋರ್ಟ್ಗೆ ಹೋಗಬೇಕು. ಜನಸಂದಣಿ ಇರುವ ಜಾಗದಲ್ಲಿ ನೂಕುನುಗ್ಗಲು ಮಾಡಿಕೊಂಡು ರೆಸ್ಟೋರೆಂಟ್ ಮುಂದೆ ನಂಬರ್ ಹೇಳಬೇಕು. ಇದೆಲ್ಲವೂ ಡೆಲಿವರಿ ಮುನ್ನ” ಎಂದಿದ್ದಾರೆ.
ಕೇವಲ 25 ರೂ. ಅಷ್ಟೇ
“ಫುಡ್ ಪಡೆದು ಬೈಕ್ ಬಳಿ ಬರಲು 15ರಿಂದ 20 ನಿಮಿಷ ಆಗುತ್ತೆ. ಇಷ್ಟೆಲ್ಲಾ ಒದ್ದಾಟ ಮಾಡಿಕೊಂಡು ಡೆಲಿವರಿ ಆಗಬೇಕಿರುವ ವಿಳಾಸಕ್ಕೆ ಹೋಗಿ, ಅದನ್ನು ತಲುಪಿಸಿದರೆ ಕೊಡುವ ಹಣದಲ್ಲಿ ಅನ್ಯಾಯ. ಐದು ಕಿಮಿ ಡೆಲಿವರಿಗೆ ಸಂಸ್ಥೆ ನಮಗೆ ಕೊಡುವುದು ಕೇವಲ 25 ರೂ. ಅಷ್ಟೇ. ಇಂತಹ ಆರ್ಡರ್‌ಗಳಿಗೆ ಯಾವುದೇ ಹೆಚ್ಚುವರಿ ಭತ್ಯೆ ಇಲ್ಲ. ಕನಿಷ್ಠ ನಮ್ಮ ಕೆಲಸವನ್ನು ಸುಲಭಗೊಳಿಸಲು ಮಾಲ್‌ನವರು ಏಕೆ ಕೆಳಗಿನ ಹಂತಕ್ಕೆ ಆರ್ಡರ್ಗಳನ್ನು ಕಳಿಸಿಕೊಡಬಾರದು? ಅಥವಾ ನಮಗೆ ಹೆಚ್ಚುವರಿ ವೇತನ ಏಕೆ ಕೊಡಬಾರದು” ಎಂದು ತಮ್ಮ ಸಮಸ್ಯೆಯನ್ನು ವಿಡಿಯೋ ಮೂಲಕ ಹೇಳಿದ್ದಾರೆ,(ಏಜೆನ್ಸೀಸ್).