ತಾಯಿಯಿಂದಲೇ 1 ಲಕ್ಷ ರೂ.ಗಳಿಗೆ ಮಾರಾಟವಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ಬಿಚ್ಚಿಟ್ಟಿದ್ದು ಕರಾಳ ಸತ್ಯ!

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ತಾಯಿಯಿಂದಲೇ ಮಾನವ ಕಳ್ಳಸಾಗಣೆದಾರರಿಗೆ ಮಾರಾಟವಾಗಿದ್ದ 15 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಭಾನುವಾರ ತಿಳಿಸಿದೆ.

ತನ್ನ ತಾಯಿ ತನ್ನನ್ನಲ್ಲದೆ ತನ್ನ ಒಂದು ವರ್ಷದ ಸೋದರನನ್ನು ಕೂಡ ಕಳೆದ ತಿಂಗಳು ಮಾರಾಟ ಮಾಡಿದ್ದರು ಎಂದು ರಕ್ಷಿಸಿರುವ ಬಾಲಕಿ ತಿಳಿಸಿದ್ದಾಳೆ.

ಕಳೆದ ವಾರ, ಬಾಲಕಿಯ ತಾಯಿ ಬಾದರ್‌ಪುರದ ತನ್ನ ಸೋದರಿಯ ಮನೆಗೆ ತೆರಳಬೇಕೆಂದು ಬಾಲಕಿಯನ್ನು ತನ್ನೊಂದಿಗೆ ಕರೆದುಕೊಂಡಿದ್ದಾಳೆ. ಆದರೆ ನಿಜಾಮುದ್ದೀನ್‌ನ ಹೋಟೆಟ್‌ಗೆ ಕರೆದೊಯ್ದಿದ್ದಾಳೆ. ತಾನು ಎಲ್ಲಿಗೋ ತೆರಳಬೇಕಿರುವುದರಿಂದಾಗಿ ವ್ಯಕ್ತಿಯೊಬ್ಬ ಬಂದು ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ ಎಂದು ತಾಯಿ ತಿಳಿಸಿದ್ದಾಳೆ.

ಬಳಿಕ ಬಂದ ವ್ಯಕ್ತಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಈ ಮೊದಲೇ ಅಲ್ಲಿದ್ದ ಬೇರೆ ಯುವತಿಯರು ಮದುವೆ ಬಟ್ಟೆಯನ್ನು ಧರಿಸು ಮತ್ತು ಸಿದ್ಧಳಾಗು ಎಂದು ಬಾಲಕಿಗೆ ಹೇಳಿದ್ದಾರೆ. ನಿನ್ನ ತಾಯಿ ನಿನ್ನನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವಿಷಯ ತಿಳಿಸಿದ್ದಾರೆ. ಬಳಿಕ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಮಹಿಳಾ ಆಯೋಗ ತಿಳಿಸಿದೆ.

ಅಲ್ಲಿಂದ ತನ್ನ ಸ್ಥಳವಾದ ಬವಾನ್‌ಗೆ ತೆರಳಿ ನೆರೆಹೊರೆಯವರನ್ನು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ. ಅವರು ಮಹಿಳಾ ಆಯೋಗಕ್ಕೆ ವಿಚಾರ ತಿಳಿಸಿದ್ದಾರೆ. ಕೂಡಲೇ ಮಹಿಳಾ ಆಯೋಗ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಬಾಲಕಿಯು ತನ್ನ ತಾಯಿ, ಮಲತಂದೆ ಮತ್ತು ನಾಲ್ವರು ಸಹೋದರರೊಂದಿಗೆ ವಾಸಿಸುತ್ತಿದ್ದಳು. ತನ್ನ ತಾಯಿಯು ಸಾಲದ ಸುಳಿಗೆ ಸಿಕ್ಕಿಕೊಂಡಿದ್ದು, ಅದನ್ನು ತೀರಿಸಲು ತನ್ನನ್ನು ಮಾರಿದ್ದಾಗಿ ಬಾಲಕಿ ತಿಳಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯನ್ನು ಆಶ್ರಯ ಮನೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *