ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆ ತರಬೇತಿಗೆ ಪ್ರವೇಶ ಪಡೆಯಲು ರೈಲಿನಲ್ಲಿ ತೆರಳುತ್ತಿದ್ದ ತಾಯಿ, ಮಗಳಿಗೆ ಆಗಿದ್ದೇನು?

ಮಥುರಾ: ಪುತ್ರಿಯನ್ನು ಇಂಜಿನಿಯರ್​ ಮಾಡಬೇಕು ಎಂಬುದು ತಾಯಿಯ ಕನಸು. ಅದರಂತೆ ಚೆನ್ನಾಗಿ ಓದಿ ತಾಯಿಯ ಕನಸನ್ನು ನನಸು ಮಾಡಬೇಕು ಎಂಬುದು ಪುತ್ರಿಯ ಬಯಕೆ. ಅದಕ್ಕೆಂದೇ ಆಕೆ ಕೋಟಾದಲ್ಲಿರುವ ತರಬೇತಿ ಕೇಂದ್ರದಲ್ಲಿ ಪ್ರವೇಶ ಪಡೆಯಲು ತಾಯಿಯ ಜತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ, ವಿಧಿಯಾಟವೇ ಬೇರೆಯಾಗಿತ್ತು…!

ಇದು ದೆಹಲಿಯ ಶಹಾದಾರಾ ಬಡಾವಣೆಯ ನಿವಾಸಿಗಳಾದ ಮೀನಾ (55), ಮನಿಷಾ (21) ಮತ್ತು ಪುತ್ರ ಆಕಾಶ್​ (23) ಕಥೆ. ಪುತ್ರಿ ಮನಿಷಾಳನ್ನು ಇಂಜಿನಿಯರ್​ ಮಾಡುವ ಆಸೆ ಮೀನಾ ಅವರದ್ದಾಗಿತ್ತು. ಅದಕ್ಕೆಂದೇ ಅವರು ತಾವು ಕಷ್ಟಪಟ್ಟು ಕೂಡಿಟ್ಟ ಹಣದೊಂದಿಗೆ ಮನಿಷಾ ಹಾಗೂ ಪುತ್ರ ಆಕಾಶ್​ನೊಂದಿಗೆ ಕೋಟಾಕ್ಕೆ ನಿಜಾಮುದ್ದೀನ್​-ತಿರುವನಂತಪುರಂ ಸೆಂಟ್ರಲ್​ ಎಫ್​ಎಫ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ತೆರಳುತ್ತಿದ್ದರು.

ರೈಲು ಅಝೈ ರೈಲು ನಿಲ್ದಾಣವನ್ನು ಹಾದು ಹೋಗುತ್ತಿದ್ದಾಗ ಯಾರೋ ತಮ್ಮ ಬ್ಯಾಗ್​ ಅನ್ನು ಎಳೆದಂತೆ ಆಗಿದ್ದರಿಂದ ಮೀನಾ ಎಚ್ಚರಗೊಂಡರು. ನೋಡಿದರೆ, ಪುತ್ರಿಯನ್ನು ಕೋಟಾ ತರಬೇತಿ ಕೇಂದ್ರಕ್ಕೆ ದಾಖಲಿಸಲು ಹಣವಿರಿಸಿದ್ದ ಚೀಲವನ್ನು ಕಳ್ಳನೊಬ್ಬ ಎಳೆಯಲು ಪ್ರಯತ್ನಿಸುತ್ತಿದ್ದದ್ದು ಕಂಡುಬಂದಿತು. ತಕ್ಷಣವೇ ಅವರು ಬ್ಯಾಗ್​ ಅನ್ನು ಬಿಗಿಯಾಗಿ ಹಿಡಿದುಕೊಂಡು ಉಳಿಸಿಕೊಳ್ಳಲು ಯತ್ನಿಸಿದರು. ಈ ಗಲಾಟೆಯಿಂದಾಗಿ ಎಚ್ಚರಗೊಂಡ ಮನಿಷಾ ಕೂಡ ಬ್ಯಾಗ್​ನ್ನು ಕಳ್ಳನಿಂದ ರಕ್ಷಿಸಿಕೊಳ್ಳಲು ಯತ್ನಿಸಿದಳು.

ಅಷ್ಟರಲ್ಲಿ ಆಗಲೇ ಇವರಿಬ್ಬರೂ ಸ್ಲೀಪರ್​ ಕೋಚ್​ನ ಬಾಗಿಲ ಬಳಿ ಬಂದಿದ್ದರು. ಇವರಿಬ್ಬರ ಮೇಲೆ ಹಠಾತ್ತನೆ ದಾಳಿ ಮಾಡಿದ ಕಳ್ಳರು, ಬಾಗಿಲಿಂದಾಚೆಗೆ ಇಬ್ಬರನ್ನೂ ನೂಕಿ, ಹಣದ ಚೀಲದೊಂದಿಗೆ ಪರಾರಿಯಾದರು. ರೈಲು ಬೃಂದಾವನ ತಲುಪಿದ ಬಳಿಕ ಚೈನ್​ ಎಳೆದ ಆಕಾಶ್​ ರೈಲನ್ನು ನಿಲ್ಲಿಸಿದ. ಬಳಿಕ ನಡೆದದ್ದನ್ನು ಅಧಿಕಾರಿಗಳಿಗೆ ವಿವರಿಸಿದ.

ತಕ್ಷಣವೇ ಅವರು ಕಳ್ಳರು ಮೀನಾ ಮತ್ತು ಮನಿಷಾ ಅವರನ್ನು ನೂಕಿದ್ದರು ಎನ್ನಲಾದ ಪ್ರದೇಶಕ್ಕೆ ಆಂಬುಲೆನ್ಸ್​ ಕಳುಹಿಸಿದರಾದರೂ, ಅಷ್ಟರಲ್ಲಿ ಅವರಿಬ್ಬರೂ ಮೃತಪಟ್ಟಿದ್ದರು. ಇದೀಗ ಅಪರಿಚಿತ ಕಳ್ಳರ ವಿರುದ್ಧ ದೂರು ಆರ್​ಪಿಎಫ್​ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *