ತಂದೆಯನ್ನು ದ್ವೇಷಿಸುತ್ತಿದ್ದ 19 ವರ್ಷದ ಪುತ್ರ ಕುಟುಂಬವನ್ನೇ ಸರ್ವನಾಶ ಮಾಡಿದ

ನವದೆಹಲಿ: ರಾಷ್ಟ್ರರಾಜಧಾನಿಯನ್ನೇ ಬೆಚ್ಚಬೀಳಿಸಿದ್ದ ತ್ರಿವಳಿ ಕೊಲೆಗೆ ಟ್ವಿಸ್ಟ್​ ಸಿಕ್ಕಿದ್ದು, ಮೃತರ ಮಗನೇ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

ಹೌದು, ದಕ್ಷಿಣ ದೆಹಲಿಯ ವಸಂತ್​ ಕುಂಜ್​ನಲ್ಲಿ ಒಂದೇ ಕುಟುಂಬದ ಮೂವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ವರದಿಯಾಗಿತ್ತು. 40 ವರ್ಷದ ಮಿಥಿಲೇಶ್, ಸಿಯಾ ದಂಪತಿ ಮತ್ತು ಇವರ 16 ವರ್ಷದ ಮಗಳು ನೇಹಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಮೃತ ಮಿಥಿಲೇಶ್​ ಉತ್ತರ ಪ್ರದೇಶದವರಾಗಿದ್ದು, ಕಂಟ್ರಾಕ್ಟರ್​ ಆಗಿ ಕೆಲಸ ಮಾಡುತ್ತಿದ್ದು ದೆಹಲಿಯಲ್ಲಿ ವಾಸವಿದ್ದರು. ಇವರ ಪುತ್ರ 19 ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ ಪುತ್ರ ಸರ್ನಮ್​ ವರ್ಮಾ ಅಲಿಯಾಸ್​ ಸೂರಜ್​ ಪಾಲಕರ ಬುದ್ಧಿಮಾತುಗಳನ್ನು ಕೇಳಲು ಸಾಧ್ಯವಾಗದೇ ಅವರ ಮೇಲೆ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ.

ಬುಧವಾರ ತಡರಾತ್ರಿ ತಂದೆ – ತಾಯಿ ಮತ್ತು ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸೂರಜ್​, ಬೆಳಗ್ಗೆ 5 ಗಂಟೆಯಷ್ಟರಲ್ಲಿ ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ್ದಾನೆ. ಆಗ ವಾಕಿಂಗ್​ಗೆ ಹೋಗಿ ಬರುತ್ತಿದ್ದ ಪಕ್ಕದ ಮನೆಯವರು ಆತನ ಸಹಾಯಕ್ಕಾಗಿ ಧಾವಿಸಿದ್ದಾರೆ. ನೆರೆಮನೆಯವರ ಬಳಿ ಸುಳ್ಳು ಹೇಳಿದ ಸೂರಜ್​, ನಮ್ಮ ಮನೆಗೆ ದರೋಡೆಕೋರರು ಬಂದು ನನ್ನ ತಂದೆ ತಾಯಿ, ತಂಗಿಯನ್ನು ಕೊಂದು ಹೋದರು ಎಂದಿದ್ದಾನೆ. ಅವರ ನೆರವಿನಿಂದ ತಕ್ಷಣ ಮೂವರನ್ನೂ ಆಸ್ಪತ್ರಗೆ ದಾಖಲಿಸಲಾಗಿದೆ. ಆದರೆ ಮೂವರೂ ಮೃತಪಟ್ಟಿದ್ದಾರೆ.

ಘಟನೆ ನಡೆದ ಕುರಿತು ದೂರು ದಾಖಲಿಸಿಕೊಂಡ ಪೊಲಿಸರು ಬುಧವಾರವೇ ಸೂರಜ್​ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸೂರಜ್​ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಮೂವರನ್ನೂ ಕೊಲೆ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದ್ದ ಸೂರಜ್​ ಮಂಗಳವಾರ ಬೆಳಗ್ಗೆ ಅಂಗಡಿಯೊಂದರಲ್ಲಿ ಚಾಕು ಮತ್ತು ಎರಡು ಕತ್ತರಿಗಳನ್ನು ಖರೀದಿ ಮಾಡಿದ್ದ.

ಅಪ್ಪ ಅಂದರೆ ದ್ವೇಷ…
ವಿಚಾರಣೆ ವೇಳೆ ಸೂರಜ್​ ತಂದೆ ಮೇಲಿದ್ದ ದ್ವೇಷದ ಬಗ್ಗೆ ಹೇಳಿಕೊಂಡಿದ್ದಾನೆ. ನನ್ನ ತಂಗಿ ಆಗಾಗ್ಗೆ ನನ್ನ ಮೊಬೈಲ್​ ಚೆಕ್​ ಮಾಡಿ, ನನ್ನ ಚಟುವಟಿಕೆಗಳ ಬಗ್ಗೆ ಪಾಲಕರಿಗೆ ತಿಳಿಸುತ್ತಿದ್ದಳು. ಹಾಗಾಗಿ ಅವಳನ್ನೂ ಕೊಂದುಬಿಟ್ಟೆ ಎಂದಿರುವ ಸೂರಜ್​, ತಂಗಿಯನ್ನು ಕೊಂದ ನಂತರ ಸತ್ತಿರುವುದನ್ನೂ ಪೊಲೀಸರ ಬಳಿ ತಿಳಿಸಿದ್ದಾನೆ. (ಏಜೆನ್ಸೀಸ್​)