ಪುಸ್ತಕ ತರದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ತರಗತಿ ವಿದ್ಯಾರ್ಥಿ

ನವದೆಹಲಿ: ಹಾಜರಾತಿ ಕೊರತೆ ಹಾಗೂ ಪುಸ್ತಕ ತರದಿದ್ದನ್ನು ಪ್ರಶ್ನಿಸಿ ಶಿಕ್ಷಕಿ ಬೈದಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿಯೊಬ್ಬ ಕಬ್ಬಿಣದ ಸಲಾಕೆಯಿಂದ ಶಿಕ್ಷಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ದೆಹಲಿಯ ಸಾಕೆಟ್​ನಲ್ಲಿ ಶನಿವಾರ ನಡೆದಿದೆ.

ಹಲವು ದಿನಗಳ ರಜೆ ನಂತರ ಶಾಲೆಗೆ ಬಂದ ವಿದ್ಯಾರ್ಥಿಯ ಬ್ಯಾಗ್​ ಅನ್ನು ಪರಿಶೀಲಿಸಿದ ಶಿಕ್ಷಕನ ಕಣ್ಣಿಗೆ ಕಬ್ಬಿಣದ ಸಲಾಕೆಯೊಂದು ಕಂಡಿದೆ. ಶಾಲೆಗೆ ಸರಿಯಾಗಿ ಬರದ ನೀನು ಪುಸ್ತಕವನ್ನೇಕೆ ತಂದಿಲ್ಲ ಎಂದು ಪ್ರಶ್ನಿಸಿ, ಆತನನ್ನು ಬೈದು ಬ್ಯಾಗ್​ನಲ್ಲಿದ್ದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ತಮ್ಮ ಟೇಬಲ್​ ಮೇಲಿಟ್ಟುಕೊಂಡಿದ್ದರು.

ಶಿಕ್ಷಕ ಕಾರ್ಯನಿರತವಾಗಿದ್ದನ್ನು ಗಮನಿಸಿ ವಿದ್ಯಾರ್ಥಿ ಸಲಾಕೆಯನ್ನು ತೆಗೆದುಕೊಂಡು ತನ್ನ ಬ್ಯಾಗ್​ನಲ್ಲಿ ಇಟ್ಟುಕೊಂಡಿದ್ದ. ಇದನ್ನು ತಿಳಿದ ಶಿಕ್ಷಕ ವಿದ್ಯಾರ್ಥಿ ಬ್ಯಾಗ್​ ಅನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿದಾಗ ರೊಚ್ಚಿಗೆದ್ದ ವಿದ್ಯಾರ್ಥಿ ಕಬ್ಬಿಣದ ಸಲಾಕೆ ತೆಗೆದು ಹಲ್ಲೆ ಮಾಡಿದ್ದಾನೆ ಎಂದು ಇತರೆ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಭಿರವಾಗಿ ಗಾಯಗೊಂಡಿದ್ದ ಶಿಕ್ಷಕನನ್ನು ಏಮ್ಸ್​ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದು, ಅದೆ ವೇಳೆಯಲ್ಲಿ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸ್​ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​​)