ಶಾಂತಿಗಾಗಿ ದೆಹಲಿಯಿಂದ ಜಿನಿವಾಕ್ಕೆ ಪಾದಯಾತ್ರೆ ; 70 ವರ್ಷದ ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ್ ಇಂಗಿತ

ನವದೆಹಲಿ: ಶಾಂತಿ ಹಾಗೂ ನ್ಯಾಯಕ್ಕಾಗಿ ದೆಹಲಿಯಿಂದ ಜಿನಿವಾಕ್ಕೆ ಸುಮಾರು 9,500 ಕಿ.ಮೀ. ದೂರ ಕಾಲ್ನಡಿಗೆ ಹಮ್ಮಿಕೊಳ್ಳುವುದಾಗಿ 70 ವರ್ಷದ ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ್​ ಪಿ.ವಿ.ಹೇಳಿದ್ದಾರೆ.

2019ರ ಅಕ್ಟೋಬರ್​ 2ರಂದು ದೆಹಲಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಿದ್ದು 2020ರ ಸೆಪ್ಟೆಂಬರ್​ನಲ್ಲಿ ಜಿನಿವಾಕ್ಕೆ ತಲುಪಲಿದ್ದೇನೆ. ನನ್ನೊಂದಿಗೆ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಜಿನಿವಾದಲ್ಲಿ ಮಾಧ್ಯಮದೆದುರು ಹೇಳಿದ್ದಾರೆ.

ಗಾಂಧೀಜಿಯವರ 150ನೇ ಜನ್ಮದಿನವನ್ನು ತುಂಬ ಮಹತ್ವಪೂರ್ಣವಾಗಿ, ಜಗತ್ತಿನಾದ್ಯಂತ ನಡೆಯುತ್ತಿರುವ ತೀವ್ರ ಸಂಘರ್ಷಗಳ ವಿರುದ್ಧ ಶಾಂತಿ ಸಾರುವ ನಿಟ್ಟಿನಲ್ಲಿ ಭಾರತ ಆಚರಿಸುತ್ತಿದೆ. ನಾನೂ ಕೂಡ ಶಾಂತಿ ಸ್ಥಾಪನೆಗಾಗಿ ಈ ಕಾಲ್ನಡಿಗೆ ಹಮ್ಮಿಕೊಂಡಿದ್ದು, ಪಾಕಿಸ್ತಾನದ ಮೂಲಕ, ಇರಾನ್​, ಟರ್ಕಿಗೆ ತೆರಳಿ ಅಲ್ಲಿಂದ ಸ್ವಿಸ್​ ಪಟ್ಟಣಕ್ಕೆ ಹೋಗುತ್ತೇನೆ ಎಂದು ಇಂಜಿನಿಯರ್​ ಹಾಗೂ ಭೂಮಿ ಇಲ್ಲದವರಿಗೆ ಭೂಹಕ್ಕು ನೀಡಲು ಯತ್ನಿಸಿದ ವಕೀಲರೂ ಆಗಿರುವ ರಾಜಗೋಪಾಲ್​ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಸಂಘರ್ಷ, ವಿಶ್ವದಾದ್ಯಂತ ಕ್ಷೀಣವಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸಿ, ಅದರತ್ತ ಗಮನ ಸೆಳೆಯುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ತನ್ನನ್ನು ಕೆಲವರು ಈಗಿನ ಕಾಲದ ಗಾಂಧಿ ಎಂದು ಕರೆಯುತ್ತಾರೆ. ಆದರೆ, ಹಾಗೆ ಕರೆಯುವುದು ನನಗೆ ಇಷ್ಟವಿಲ್ಲ. ನನ್ನ ಕಾಲ್ನಡಿಗೆಗೆ ದಲೈಲಾಮಾ ಅಥವಾ ಬರಾಕ್​ ಓಬಾಮಾ ಬೆಂಬಲ ನೀಡುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.