ರೈಲಿನಲ್ಲಿ ಮದುವೆಗೆಂದು ತೆರಳುತ್ತಿದ್ದವರು ವರನ ಅಂತ್ಯ ಸಂಸ್ಕಾರಕ್ಕೆ ಹೊರಟ ಕರುಣಾಜನಕ ಕಥೆ ಇದು…

ನವದೆಹಲಿ: ಹೊಸ ಬಾಳಿನ ಕನಸನ್ನು ಹೊತ್ತು ವಿವಾಹವಾಗಲು ತೆರಳುತ್ತಿದ್ದ ವರನ ಜೀವನ ರೈಲಿನಲ್ಲಿ ಅಂತ್ಯವಾಗಿದೆ. ವಿವಾಹವಾಗಲೆಂದು ಬಿಹಾರದ ನವಾಡಕ್ಕೆ ತೆರಳುತ್ತಿದ್ದ ವರ ಫೋನ್ ಸ್ನ್ಯಾಚರ್ ವಿರುದ್ಧದ ಹೋರಾಟದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ಧೌಲಾ ಕೌನ್‌ ರೈಲ್ವೆ ನಿಲ್ದಾಣದ ಸಮೀಪ ಘಟನೆ ನಡೆದಿದ್ದು, ಮೃತಪಟ್ಟವ ಫೋನ್‌ ಸ್ನ್ಯಾಚರ್‌ನೊಂದಿಗೆ ಹೋರಾಡುತ್ತಿರುವಾಗ ರೈಲ್ವೆ ಹಳಿ ಮೇಲೆ ಬಿದ್ದು ಬಲಗಾಲಿಗೆ ಗಾಯವಾಗಿದೆ. ಈತ ಪ್ಲಂಬರ್‌ ಕೆಲಸ ಮಾಡುತ್ತಿದ್ದು, ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯವನಾಗಿದ್ದ.

ಬಾಗಿಲನ್ನು ತೆರೆದು ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಬಂದ ಕಳ್ಳ ಆತನ ಫೋನನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಹೋರಾಡುತ್ತಿದ್ದ ವರ ಬಾಗಿಲಿನಲ್ಲಿದ್ದ ಕಬ್ಬಿಣದ ಕಂಬಿಯನ್ನು ಹಿಡಿದುಕೊಂಡಿದ್ದಾನೆ. ಆದರೆ, ನಿಯಂತ್ರಣ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದು ಮೃತಪಟ್ಟಿದ್ದಾನೆ.

ಮೃತನ ಸೋದರ ಸಂಬಂಧಿ ಘಟನೆಯನ್ನು ವಿವರಿಸುತ್ತಾ, ಕುಟುಂಬಸ್ಥರು ನವದೆಹಲಿಯಿಂದ ಆತನ ಮದುವೆಗೆಂದು ರೈಲಿನಲ್ಲಿ ತೆರಳುತ್ತಿದ್ದರು. ಘಟನೆ ನಡೆದಾಗ ವಧುವಿನೊಂದಿಗೆ ವರ ಫೋನ್‌ನಲ್ಲಿ ಮಾತನಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಅವರೆಲ್ಲರೂ ವಿವಾಹಕ್ಕೆಂದು ತೆರಳುತ್ತಿದ್ದರು. ಆದರೆ, ಈಗ ಅಂತ್ಯ ಸಂಸ್ಕಾರಕ್ಕೆ ತೆರಳಬೇಕಾಗಿದೆ ಎಂದು ಮೃತನ ಚಿಕ್ಕಪ್ಪ ನೋವು ತೋಡಿಕೊಳ್ಳುತ್ತಾರೆ. (ಏಜೆನ್ಸೀಸ್)