ಕುಡಿತ ಬಿಡು ಎಂದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ: ಅಮಲಿನಲ್ಲಿ ಶವದ ಪಕ್ಕವೇ ಮಲಗಿ ರಾತ್ರಿ ಕಳೆದ

ನವದೆಹಲಿ: ವಿಪರೀತ ಕುಡಿತ ಹವ್ಯಾಸ ಹೊಂದಿದ್ದ ತನಗೆ ಕುಡಿತ ಬಿಡು ಎಂದು ಬುದ್ಧಿವಾದ ಹೇಳಿದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯನೊಬ್ಬ, ಶವದ ಪಕ್ಕದಲ್ಲೇ ಮಲಗಿ ರಾತ್ರಿ ಕಳೆದಿದ್ದಾನೆ. ಬಳಿಕ ತನ್ನಿಂದಾಗಿರುವ ಪ್ರಮಾದವನ್ನು ಬೆಳಗ್ಗೆ ಗಮನಿಸಿದ ಆತ ಸ್ಥಳದಿಂದ ಪರಾರಿಯಾಗಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ದೆಹಲಿಯ ಹೊರವಲಯದ ನಿಹಾಲ್​ ವಿಹಾರ್​ ನಿವಾಸಿ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದ ಬಬಲಿ (28) ಮೃತ ಮಹಿಳೆ. ಪ್ರೇಮ್​ ಸಿಂಗ್​ ಬಂಧಿತ. ಈತ ಖಾಸಗಿ ಟಿವಿ ಚಾನಲ್​ಗಳ ವಿತರಕ ಕಂಪನಿಯ ಉದ್ಯೋಗಿಯಾಗಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪತಿಯ ಕುಡಿತದ ಹವ್ಯಾಸದಿಂದ ಬೇಸತ್ತಿದ್ದ ಬಬಲಿ, ಕುಡಿತವನ್ನು ಬಿಡುವಂತೆ ಪ್ರೇಮ್​ನನ್ನು ಆಗ್ರಹಿಸುತ್ತಿದ್ದಳು. ಈ ವಿಷಯವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅದರಂತೆ ಕಳೆದ ಬುಧವಾರ ರಾತ್ರಿ ಕೂಡ ದಂಪತಿ ನಡುವೆ ಜಗಳವಾಗಿತ್ತು. ಮದ್ಯದ ಅಮಲಿನಲ್ಲಿದ್ದ ಪ್ರೇಮ್​ ಪತ್ನಿಯ ಕತ್ತು ಹಿಸುಕಿದ್ದ. ಆದರೆ, ಆಕೆ ಸತ್ತಿರುವುದು ತಿಳಿಯದೆ ಆಕೆಯ ಮೃತದೇಹದ ಪಕ್ಕದಲ್ಲೇ ರಾತ್ರಿ ಮಲಗಿಕೊಂಡಿದ್ದ. ಬೆಳಗ್ಗೆ ಎದ್ದಾಗ ಪತ್ನಿ ಸತ್ತಿರುವುದು ಖಚಿತವಾಗುತ್ತಿದ್ದಂತೆ ಪರಾರಿಯಾಗಿದ್ದ. ನೆರೆಹೊರೆಯವರು ನೀಡಿದ ಮಾಹಿತಿ ಮೇರೆಗೆ ಆತನನ್ನು ಬಂಧಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ. (ಏಜೆನ್ಸೀಸ್​)