ದೆಹಲಿಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿಸಿದ, ಪ್ರತಿಭಟಿಸಿದ್ದಕ್ಕೆ ರಿವರ್ಸ್​ನಲ್ಲಿ ಬಂದು ಡಿಕ್ಕಿ ಹೊಡೆಸಿ ಪರಾರಿಯಾದ…

ನವದೆಹಲಿ: ಪಾನಮತ್ತರಾಗಿ ವಾಹನ ಚಲಾಯಿಸುವುದು ಸೇರಿ ಹಲವು ಬಗೆಯ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜುಲ್ಮಾನೆಯನ್ನು ಹತ್ತಾರುಪಟ್ಟು ಹೆಚ್ಚಿಸಿದ್ದರೂ ಜನರು ಮಾತ್ರ ಸಂಚಾರ ನಿಯಮ ಉಲ್ಲಂಘನೆಯನ್ನು ಮುಂದುವರಿಸಿದ್ದಾರೆ. ದೆಹಲಿಯಲ್ಲಂತೂ ಗುದ್ದೋಡು (ಹಿಟ್​ ಆ್ಯಂಡ್​ ರನ್​) ಪ್ರಕರಣಗಳು ಮಿತಿಮೀರಿ ಹೆಚ್ಚಾಗುತ್ತಿವೆ. ಭಾನುವಾರ ರಾತ್ರಿ ಕಪ್ಪು ಬಣ್ಣದ ಐಷಾರಾಮಿ ಕಾರಿನ ಮಾಲೀಕ ಕೂಡ ಇದೇ ರೀತಿಯ ಗುದ್ದೋಡು ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೆಹಲಿಯ ಮಾಡಲ್​ ಟೌನ್​ನ ಗುಪ್ತಾ ಕಾಲನಿಯಲ್ಲಿ ಭಾನುವಾರ ರಾತ್ರಿ ಕಪ್ಪು ಐಷಾರಾಮಿ ಕಾರಿನಲ್ಲಿ ಬರುವ ಕೆಲ ಪುಂಡರು ಹೋಗುತ್ತಿರುತ್ತಾರೆ. ಜನರನ್ನು ಕಂಡು ನಿಲ್ಲಿಸುವ ಪುಂಡರು, ಅಲ್ಲಿದ್ದ ಮಹಿಳೆಯರನ್ನು ಚುಡಾಯಿಸಲು ಆರಂಭಿಸುತ್ತಾರೆ. ಸ್ಥಳದಲ್ಲಿದ್ದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಅವರ ಮೇಲೆ ಕಾರು ಹರಿಸಿಕೊಂಡು ಮುಂದೆ ಸಾಗುತ್ತಾರೆ. ಜನರು ಬೆನ್ನಟ್ಟಿದಾಗ ಕಾರು ನಿಲ್ಲಿಸುವ ಪುಂಡರು ಅವರೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ.

ಗುಂಪಿನಲ್ಲಿರುವ ಜನರು ತಮ್ಮ ಮೇಲೆ ಜೋರಾಗಿ ಬೈಯ್ಯಲಾರಂಭಿಸುತ್ತಿದ್ದಂತೆ ಸಿಟ್ಟಿಗೇಳುವ ಪುಂಡರು ರಿವರ್ಸ್​ನಲ್ಲಿ ಕಾರು ಚಲಾಯಿಸಿಕೊಂಡು ಗುಂಪಿನ ಮೇಲೆ ಹರಿಸಲು ಪ್ರಯತ್ನಿಸುತ್ತಾರೆ. ಆಗ ಜನರು ಕಾರಿನ ಮೇಲೆತ್ತಿ ಅವರನ್ನು ಹಿಡಿಯಲು ಪ್ರಯತ್ನಿಸುತ್ತಿರುವಂತೆ ಮತ್ತೆ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಕಾರಿನ ಮೇಲೆ ಹತ್ತಿದ್ದ ವ್ಯಕ್ತಿಯೊಬ್ಬ ಬಿದ್ದು ಗಾಯಗೊಳ್ಳುತ್ತಾನೆ. ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪುಂಡರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *