ಲಂಚ ಪಡೆಯುತ್ತಿದ್ದಾಗ ಜಿಎಸ್​ಟಿ ಸಹಾಯಕ ಆಯುಕ್ತ ಸೇರಿ ಇಬ್ಬರನ್ನು ಬಂಧಿಸಿದ ಸಿಬಿಐ

ನವದೆಹಲಿ: ಲಂಚ ಪಡೆದ ಆರೋಪದ ಮೇಲೆ ದೆಹಲಿ ಸರ್ಕಾರದ ಜಿಎಸ್​ಟಿ ಸಹಾಯಕ ಆಯುಕ್ತ ಸೇರಿ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.

ದೆಹಲಿಯ ಕರೋಲ್​ ಬಾಗ್​ ಪ್ರದೇಶದ ಖಾಸಗಿ ಕಂಪನಿಯೊಂದರ ಮುಟ್ಟುಗೋಲು ಕಾರ್ಯಾಚರಣೆ ಸಂದರ್ಭದಲ್ಲಿ ಜಿಎಸ್​ಟಿ ಸಹಾಯಕ ಆಯುಕ್ತ ಸುಮಾರು 6 ಲಕ್ಷ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇಬ್ಬರೂ ಹಣ ಪಡೆಯುತ್ತಿದ್ದ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಗಿ ಸಿಬಿಐ ತಿಳಿಸಿದೆ.

ಅಲ್ಲದೆ, ಜಿಎಸ್​ಟಿ ಸಹಾಯಕ ಆಯುಕ್ತರ ಮನೆಯಿಂದ 2.75 ಲಕ್ಷ ರೂಪಾಯಿ ಹಾಗೂ ಅಕ್ರಮ ವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೇ ಇನ್ನೊಬ್ಬ ಅಧಿಕಾರಿ ಮನೆಯಿಂದ 20 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಮಾಹಿತಿ ನೀಡಿದೆ. ಈ ಇಬ್ಬರೂ ಆರೋಪಿಗಳನ್ನೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ.