ದಿಲ್ಲಿಯಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗುತ್ತಿದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಫೈಟ್ ರಂಗೇರಿದೆ. 22 ವರ್ಷಗಳಿಂದ ದಿಲ್ಲಿ ಚುನಾವಣೆ ಗೆಲ್ಲಲಾಗದೆ ಹೈರಾಣಾಗಿರುವ ಬಿಜೆಪಿ, ಈ ಬಾರಿ ಕೇಜ್ರಿವಾಲ್ ಅಲೆಯನ್ನು ಬದಿಗಟ್ಟಿ ಎರಡೂ ಕಾಲು ದಶಕಗಳ ರಾಜಕೀಯ ವನವಾಸಕ್ಕೆ ಅಂತ್ಯ ಹಾಡುವುದೇ ಎಂಬುದು ಕುತೂಹಲ ಕೆರಳಿಸಿದೆ.
ರಾಷ್ಟ್ರವಾದ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನೇ ನೆಚ್ಚಿಕೊಂಡು ದಿಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ಪರ್ಯಾಯ ಎನಿಸುವ ಭರವಸೆಯ ಸ್ಥಳೀಯ ನಾಯಕನಿಲ್ಲದೆ ಸೊರಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲೂ ಮೋದಿ ನಾಮದ ಜಪದಲ್ಲೇ ಮತ ಯಾಚಿಸುವ ಸ್ಥಿತಿ ಕೇಸರಿಪಡೆಯದ್ದು. ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ, ಮಾಜಿ ಕೇಂದ್ರ ಸಚಿವ ವಿಜಯ್ ಗೋಯೆಲ್, ಹಾಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಶಾಸಕ ವಿಜೇಂದರ್ ಗುಪ್ತಾ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರೂ ಮೋದಿ-ಅಮಿತ್ ಷಾಮಾತ್ರ ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಿರುವುದರಿಂದ ಮತದಾರರು ಕೂಡ ‘ಕೇಜ್ರಿವಾಲ್ ನಹೀ ತೋ ಔರ್ ಕೌನ್’ ಎಂಬ ಪ್ರಶ್ನೆ ಮುಂದಿಡುತ್ತಿದ್ದಾರೆ.
1998ರಲ್ಲಿ ಸುಷ್ಮಾ ಸ್ವರಾಜ್ ದಿಲ್ಲಿ ಮುಖ್ಯಮಂತ್ರಿಯಾಗಿದ್ದರು. ಈರುಳ್ಳಿ ಸೇರಿ ಪ್ರಮುಖ ತರಕಾರಿಗಳ ಬೆಲೆ ಗಗನಕ್ಕೇರಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ಹೀನಾಯವಾಗಿ ತಿರಸ್ಕರಿಸಿದ್ದರು. ಅದಾದ ಬಳಿಕ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿಲ್ಲ. 2013ರಲ್ಲಿ ಅಧಿಕಾರದ ಹತ್ತಿರ ಬಂದರೂ ಆಮ್ ಆದ್ಮಿ ಪಕ್ಷಕ್ಕಿಂತ ಕಡಿಮೆ ಸೀಟುಗಳು ಬಂದಿದ್ದರಿಂದ ಸರ್ಕಾರ ರಚಿಸುವ ಸಾಹಸಕ್ಕೆ ಕೈಹಾಕಲಿಲ್ಲ. 2015ರ ಚುನಾವಣೆಯಲ್ಲಿ ಕೇಜ್ರಿವಾಲ್ ಬಿರುಗಾಳಿಗೆ ಬಿಜೆಪಿ ಧೂಳೀಪಟಗೊಂಡರೆ, ಕಾಂಗ್ರೆಸ್ ಮೊದಲ ಬಾರಿಗೆ ಶೂನ್ಯ ಸಂಪಾದನೆಯ ಸಾಧನೆ ಮಾಡಿತ್ತು!
ಅಧಿಕಾರದ ಆರಂಭಿಕ ವರ್ಷಗಳಲ್ಲಿ ಕೇಜ್ರಿವಾಲ್ ಸಾಮಾಜಿಕ ಜಾಲತಾಣ, ಮಾಧ್ಯಮದ ಮುಂದೆ ಮೋದಿ ಸರ್ಕಾರದ ವಿರುದ್ಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಾ, ಲೆಫ್ಟಿನಂಟ್ ಗವರ್ನರ್ ಜತೆ ದಿನವೂ ತಿಕ್ಕಾಟ ನಡೆಸುತ್ತಿದ್ದರು. ಅವರ ಬೊಬ್ಬೆ ಕೇಳಿ ಜನರೂ ಸುಸ್ತಾಗಿದ್ದರು. ಕೇಜ್ರಿವಾಲ್ಗೆ ಬುದ್ಧಿ ಕಲಿಸಲೇಬೇಕು ಎಂದು ನಿರ್ಣಯಿಸಿದ್ದ ದಿಲ್ಲಿ ಮಂದಿ, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಅಭೂತಪೂರ್ವ ರೀತಿಯಲ್ಲಿ ಗೆಲ್ಲಿಸಿದ್ದರು. ಸೋಲೆನ್ನುವುದು ವ್ಯಕ್ತಿಯೊಬ್ಬನನ್ನು ಹೇಗೆ ಬದಲಿಸುತ್ತದೆ ಎನ್ನಲು ಈ ಘಟನೆ ನಿದರ್ಶನವಾಗಿತ್ತು. ಆಡಳಿತದಲ್ಲಿ ಮಾತಿಗಿಂತ ಕೃತಿಗೆ ಆದ್ಯತೆ ನೀಡಿದ ಕೇಜ್ರಿವಾಲ್, ತಮ್ಮ ವರ್ತನೆಗಳಲ್ಲೂ ಆಮೂಲಾಗ್ರ ಪರಿವರ್ತನೆ ತಂದುಕೊಂಡರು. ಮೊದಲಿನ- ಈಗಿನ ಕೇಜ್ರಿವಾಲ್ ಮಧ್ಯೆ ಅಜಗಜಾಂತರ. ವೈಯಕ್ತಿಕ ಕೆಸರೆರಚಾಟಕ್ಕಿಂತ ಸರ್ಕಾರದ ಕೆಲಸವೇ ಮಾತನಾಡಬೇಕೆಂಬುದನ್ನು ರೂಢಿಸಿಕೊಂಡ ಸಿಎಂ, ಜನೋಪಯೋಗಿ ಯೋಜನೆಗಳ ಮೂಲಕ ಬಿಜೆಪಿ-ಕಾಂಗ್ರೆಸ್ಗೆ ಉತ್ತರ ನೀಡಿದರು. ಇದೇ ಕಾರಣಕ್ಕೆ, ಕೇಜ್ರಿವಾಲ್ರ ಸ್ಥಳೀಯವಾದದ ಮುಂದೆ ಮೋದಿ-ಅಮಿತ್ ಷಾ ಅವರ ರಾಷ್ಟ್ರೀಯವಾದ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿಯ ವಿಷಯಗಳು (ಎನ್ಆರ್ಸಿ) ಮತದಾರರನ್ನು ಸೆಳೆದಂತೆ ಕಾಣುತ್ತಿಲ್ಲ.
ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಜ್ರಿವಾಲ್, ನಾಮಪತ್ರ ಸಲ್ಲಿಕೆಗೆ ಮುನ್ನ ದಿಲ್ಲಿ ಆರ್.ಕೆ. ಆಶ್ರಮ್ ಮಂದಿರ್ ಮಾರ್ಗ, ಪಂಚ್ ಕುವ್ಯಾ ಪ್ರದೇಶಗಳಲ್ಲಿ ಪ್ರಚಾರಾಭಿಯಾನ ನಡೆಸುವಾಗ ‘ನಿಮ್ಮಲ್ಲಿ ನಾನು ಸಿಎಎ-ಎನ್ಆರ್ಸಿ ಬಗ್ಗೆ ರ್ಚಚಿಸಬೇಕೋ ಅಥವಾ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯದ ಬಗ್ಗೆ ಮಾತನಾಡಬೇಕೋ’ ಎಂದು ಜನರ ಮುಂದೆ ಪ್ರಶ್ನೆಯನ್ನಿಟ್ಟರು. ‘ನೀರು, ಶಿಕ್ಷಣ, ವಿದ್ಯುತ್’ ಎಂದು ಜನ ಕೂಗು ಹಾಕಿದರೇ ವಿನಃ ಪೌರತ್ವ ಕಾಯ್ದೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅದೇ ರೀತಿಯಾಗಿ, ಪ್ರತಿಷ್ಠಿತ ಮಾಧ್ಯಮವೊಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲೂ ಪೌರತ್ವ ಕಾಯ್ದೆ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆ ಬದಿಗೊತ್ತಿದ ಕೇಜ್ರಿವಾಲ್, ಇದಕ್ಕೆ ನೀವೇ ಉತ್ತರಿಸಿ ಎಂದು ಕೈಯನ್ನು ಪ್ರೇಕ್ಷಕರ ಕಡೆ ಬೀಸಿದರು. ಅಲ್ಲಿಯೂ, ‘ಬಿಜ್ಲಿ, ಪಾನೀ’ ಎಂದೇ ಬೊಬ್ಬಿಟ್ಟ ಮಂದಿ, ನಿರೂಪಕನ ಧ್ವನಿಯನ್ನೇ ಅಡಗಿಸಿದ್ದರು! ವಿಧಾನಸಭೆ ಚುನಾವಣೆಯಲ್ಲಿ ದಿಲ್ಲಿ ಜನ ಏನನ್ನು ನಿರೀಕ್ಷಿಸುತ್ತಿದ್ದಾರೆನ್ನುವುದು ಇದರಿಂದಲೇ ಸ್ಪಷ್ಟವಾದಂತಿದೆ.
‘ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ರದ್ದತಿ ಕ್ರಮ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿ ಕೇಂದ್ರ ಸರ್ಕಾರದ ವಿವಿಧ ಕ್ರಾಂತಿಕಾರಿ ಕ್ರಮಗಳು ಲೋಕಸಭೆ ಚುನಾವಣೆಗೆ ಮತ ಬಾಚುವ ಅಸ್ತ್ರಗಳಾಗಬಹುದು. ಆದರೆ, ದಿಲ್ಲಿ ಚುನಾವಣೆಯನ್ನಂತೂ ಈ ವಿಷಯಗಳಿಂದ ಗೆಲ್ಲಲಾಗದು. ಕೇಜ್ರಿವಾಲ್ ವಿರೋಧಿ ಅಭಿಯಾನಕ್ಕೆ ಬಿಜೆಪಿ ಬಳಿ ಬ್ರಹ್ಮಾಸ್ತ್ರವಿಲ್ಲ. ಮೋದಿ ರಾಷ್ಟ್ರನಾಯಕರೇ ವಿನಃ ದಿಲ್ಲಿಗೆ ಮುಖ್ಯಮಂತ್ರಿ ಆಗಲಾರರು. ಪ್ರಧಾನಿಯಾಗಿ ಅವರನ್ನು ಒಪ್ಪುತ್ತೇವೆ. ಆದರೆ, ದಿಲ್ಲಿ ಮಟ್ಟಿಗೆ ಕೇಜ್ರಿವಾಲ್ರನ್ನು ವಿರೋಧಿಸಬೇಕೆಂದು ನನಗನಿಸುತ್ತಿಲ್ಲ’ ಎನ್ನುತ್ತಾರೆ ಮಯೂರ್ ವಿಹಾರ್ ನಿವಾಸಿ, ದಿಲ್ಲಿ ಯೂನಿವರ್ಸಿಟಿ ವಿದ್ಯಾರ್ಥಿನಿ ಏಕ್ತಾ ಗೌರ್.
ಹಾಗಾದರೆ, ಮೂವರು ಶಾಸಕರನ್ನಿಟ್ಟುಕೊಂಡು ವಿಪಕ್ಷ ಸ್ಥಾನದಲ್ಲಿ ಕೂತ ಬಿಜೆಪಿ ಐದು ವರ್ಷಗಳಲ್ಲಿ ಕೇಜ್ರಿವಾಲ್ರನ್ನು ಕಟ್ಟಿಹಾಕಬಲ್ಲ ಸಮರ್ಥ ನಾಯಕನನ್ನು ರೂಪಿಸುವಲ್ಲಿ ವಿಫಲವಾಯಿತೇ? ಬಿಹಾರದ ಭೋಜ್ಪುರಿ ಭಾಷೆ ಮಾತನಾಡುವ, ಪೂರ್ವಾಂಚಲ ಭಾಗದ ಮನೋಜ್ ತಿವಾರಿ, ಕಲಾ ನೈಪುಣ್ಯತೆ ಮೂಲಕ ಉತ್ತರ ಭಾರತದಲ್ಲಿ ಹೆಸರುವಾಸಿ ಕಲಾವಿದರಾಗಿದ್ದರೂ ದಿಟ್ಟ, ಪ್ರಖರ ರಾಜಕೀಯ ನಾಯಕತ್ವದ ಗುಣ ಹೊಂದಿಲ್ಲ. ಇಲ್ಲಿ ಪೂರ್ವಾಂಚಲಿಗಳ ಮತಬ್ಯಾಂಕ್ ದೊಡ್ಡದಿದ್ದರೂ, ಕೇಜ್ರಿವಾಲ್ರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಕೋನ ಹಾಗೂ ವೈಯಕ್ತಿಕ ಚರಿಷ್ಮಾ ಮುಂದೆ ತಿವಾರಿ ಜನಾಕರ್ಷಣೆ ಗಳಿಸಲು ವಿಫಲರಾಗುತ್ತಿದ್ದಾರೆ. ಇದೇ ಕಾರಣಕ್ಕೆ, ಮೋದಿ-ಷಾ ಜೋಡಿಯೇ ದಿಲ್ಲಿ ಚುನಾವಣೆಯಲ್ಲೂ ಬಿಜೆಪಿಯ ಪ್ರಮುಖ ಮುಖಗಳಾಗಿ ಹೊರಹೊಮ್ಮಿವೆ. ಆದರೆ, ‘ಮೋದಿ-ಷಾ ನಾಯಕತ್ವ ಒಪ್ಪಿಕೊಂಡು ವೋಟು ಹಾಕಲು ಇದು ಲೋಕಸಭೆ ಚುನಾವಣೆಯಲ್ಲ’ ಎಂಬ ಮಾತು ಬಿಜೆಪಿ ಬೆಂಬಲಿಗ ಕಾರ್ಯಕರ್ತರ ಗುಂಪುಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕೇಳಿ ಬರುತ್ತಿರುವಾಗ ಬಹುತೇಕ ಮತದಾರರು ತಮ್ಮ ಆಯ್ಕೆಯನ್ನು ನಿರ್ಧರಿಸಿಬಿಟ್ಟಿದ್ದಾರಾ ಎಂಬ ಪ್ರಶ್ನೆ ಮೂಡುವುದು ಸಹಜವೇ.
ಧ್ರುವೀಕರಣ ತಂತ್ರ: ಸಿಎಎ ವಿರೋಧಿಸಿ ದೆಹಲಿಯ ಜಾಮಿಯಾ ಯೂನಿವರ್ಸಿಟಿ ಬಳಿ ನಡೆದ ಹಿಂಸಾಚಾರ, ಶಾಹೀನ್ ಭಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸುತ್ತಿರುವ ಬಿಜೆಪಿ, ಹಿಂದು ಮತಗಳ ಕ್ರೋಡೀಕರಣಕ್ಕೆ ತಂತ್ರ ಹೂಡಿದೆ. ಶಾಹೀನ್ ಭಾಗ್ನಲ್ಲಿ ಮುಸ್ಲಿಂ ಧರ್ಮದವರು ಹಾಗೂ ಎಡಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದಷ್ಟು ಬಿಜೆಪಿಗೆ ರಾಜಕೀಯವಾಗಿ ಲಾಭ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಜ.27ರಂದು ಗೃಹ ಸಚಿವ ಅಮಿತ್ ಷಾ ದೆಹಲಿಯ ಬಾಬರ್ ಪುರ್ ಕ್ಷೇತ್ರದಲ್ಲಿ ಏರ್ಪಡಿಸಿದ್ದ ರ್ಯಾಲಿಯಲ್ಲಿ, ‘ಫೆ.8ರಂದು ನೀವು ವೋಟ್ ಬಟನ್ ಒತ್ತುವ ತೀವ್ರತೆ ಶಾಹೀನ್ ಭಾಗ್ನಲ್ಲಿ ನಡುಕ ಹುಟ್ಟಿಸುವಂತಿರಬೇಕು’ ಎಂದಿರುವುದು ಈ ತಂತ್ರಗಾರಿಕೆಯ ಮುಂದುವರಿದ ಭಾಗವಷ್ಟೇ.