ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೇಡು ತೀರಿಸಿಕೊಳ್ಳಲು ವಿಫಲವಾದ ಆರ್​ಸಿಬಿ: ವಿರಾಟ್​ ಬಳಗಕ್ಕೆ 16 ರನ್​ಗಳ ಸೋಲು

ನವದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿಫಲವಾಗಿದ್ದು, 16 ರನ್​ಗಳ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಐಪಿಎಲ್​ 12ರ ಪ್ಲೇಆಫ್​ ಕನಸು ಭಗ್ನಗೊಂಡಿದೆ.

ಡೆಲ್ಲಿ ನೀಡಿದ್ದ 188 ರನ್​ ಗುರಿ ಬೆನ್ನತ್ತಿದ ಆರ್​ಸಿಬಿಗೆ ಆರಂಭಿಕ ಆಟಗಾರರಾದ ಪಾರ್ಥಿವ್​ ಪಟೇಲ್​ (39) ಮತ್ತು ನಾಯಕ ವಿರಾಟ್​ ಕೊಹ್ಲಿ (23) ಮೊದಲ ವಿಕೆಟ್​ಗೆ 63 ರನ್​ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ 5 ರನ್​ಗಳ ಅಂತರದಲ್ಲಿ ಇವರಿಬ್ಬರೂ ವಿಕೆಟ್​ ಒಪ್ಪಿಸಿದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್​ಮನ್​ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಕಾರಣ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 171 ರನ್​ ಗಳಿಸಿತು. ಈ ಮೂಲಕ 16 ರನ್​ಗಳಿಂದ ಸೋಲನುಭವಿಸಿತು.

ಡೆಲ್ಲಿ ಪರ ಅಮಿತ್​ ಮಿಶ್ರಾ 29 ಕ್ಕೆ 2, ರಬಾಡಾ 31 ಕ್ಕೆ 2 ವಿಕೆಟ್​ ಪಡೆದರು.

ಇದಕ್ಕೂ ಮೊದಲು ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 187 ರನ್​ ಗಳಿಸಿತ್ತು. ಡೆಲ್ಲಿ ಪರ ಶ್ರೇಯಸ್​ ಅಯ್ಯರ್​ (52), ಶಿಖರ್​ ಧವನ್​ (50) ಆಕರ್ಷಕ ಅರ್ಧ ಶತಕ ಗಳಿಸಿದರೆ ಇನಿಂಗ್ಸ್​ ಕೊನೆಯಲ್ಲಿ ಶೇರ್ಫೆನ್​ ರುದರ್​ಫೋರ್ಡ್​ (28*) ಬಿರುಸಿನ ಆಟವಾಡಿ ತಂಡದ ಮೊತ್ತ 180ರ ಗಡಿ ದಾಟಿಸಿದರು. ಆರ್​ಸಿಬಿ ಪರ ಯಜುವೇಂದ್ರ ಚಾಹಲ್​ 41 ಕ್ಕೆ 2 ವಿಕೆಟ್​ ಪಡೆದರು.