ಡೆಲ್ಲಿ ಕ್ಯಾಪಿಟಲ್ಸ್​ಗೆ ಮುಂಬೈ ಇಂಡಿಯನ್ಸ್ ಸವಾಲು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತಂಡ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ವಾಣಿಜ್ಯ ರಾಜಧಾನಿ ಮುಂಬೈಯ ಮುಂಬೈ ಇಂಡಿಯನ್ಸ್ ತಂಡಗಳು ಗುರುವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿ ಯಾಗಲಿವೆ.

ರೋಹಿತ್ ಶರ್ಮ ಸಾರಥ್ಯದ ಮುಂಬೈ ತಂಡ, ಬ್ಯಾಟ್ಸ್ ಮನ್​ಗಳ ಪಾರಮ್ಯಕ್ಕೆ ಸಾಕ್ಷಿಯಾಗಿರುವ ಟಿ20 ಮಾದರಿಯಲ್ಲಿ ಬೌಲರ್​ಗಳಿಗೂ ಯಶಸ್ಸು ಸಿಗುತ್ತದೆ ಎಂದು ತೋರಿಸಿಕೊಟ್ಟಿರುವ ವೇಗಿ ಕಗಿಸೋ ರಬಾಡ ಅವರನ್ನು ಹೇಗೆ ಎದುರಿಸಲಿದೆ ಹಾಗೂ ವಿಶ್ವಕಪ್ ತಂಡದಿಂದ ಹೊರಬಿದ್ದ ನಿರಾಸೆಯಲ್ಲಿರುವ ರಿಷಭ್ ಪಂತ್​ರನ್ನು ಹೇಗೆ ಕಟ್ಟಿಹಾಕಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಐಪಿಎಲ್​ನಲ್ಲಿ ಅತ್ಯುತ್ತಮ ಬೌಲಿಂಗ್ ವಿಭಾಗ ಹೊಂದಿರುವ ಎರಡು ತಂಡಗಳು ಎದುರಾಗಲಿವೆ. ಏಳು-ಬೀಳಿ ನೊಂದಿಗೆ ಲೀಗ್​ಅನ್ನು ಆರಂಭಿಸಿದರೂ, ಯುವ ಆಟಗಾರರನ್ನು ಒಳಗೊಂಡ ಡೆಲ್ಲಿ ಕಳೆದ ಕೆಲ ಪಂದ್ಯದಲ್ಲಿ ಭರ್ಜರಿ ನಿರ್ವಹಣೆ ತೋರುವ ಮೂಲಕ, ಯಾವ ತಂಡವನ್ನಾದರೂ ಮಣಿಸುವ ವಿಶ್ವಾಸ ಪಡೆದುಕೊಂಡಿದೆ. ಆಡಿದ 8 ಪಂದ್ಯಗಳಿಂದ 10 ಅಂಕ ಸಂಪಾದಿಸಿರುವ ಎರಡೂ ತಂಡಗಳು ಪ್ಲೇಆಫ್​ಗೇರುವ ಹಾದಿಯಲ್ಲಿವೆ.

ಹಾಲಿ ಐಪಿಎಲ್​ನಲ್ಲಿ ಗರಿಷ್ಠ ಡಾಟ್ ಬಾಲ್ ಎಸೆದ ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈವರೆಗೂ ಆಡಿದ 8 ಪಂದ್ಯಗಳಿಂದ ವೇಗಿ ಬುಮ್ರಾ 90 ಡಾಟ್ ಬಾಲ್​ಗಳನ್ನು ಎಸೆದಿದ್ದಾರೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಉಭಯ ತಂಡಗಳು 10 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ ತಂಡ 7 ಪಂದ್ಯಗಳಲ್ಲಿ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 3 ಪಂದ್ಯಗಳಲ್ಲಿ ಜಯಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್: ದಿನಗಳು ಉರುಳಿದಂತೆ ಡೆಲ್ಲಿ ತಂಡ ಬಲಿಷ್ಠವಾಗುತ್ತಾ ಸಾಗುತ್ತಿದೆ. ತಂಡದಲ್ಲಿ ಸಮತೋಲನ ಕಂಡುಕೊಂಡಿರುವುದು ಯಶಸ್ಸಿಗೆ ಕಾರಣವಾಗಿದೆ. ಆದರೆ, ಉತ್ತಮ ಆರಂಭ ತಂಡದ ಸಮಸ್ಯೆಯಾಗಿ ಆಡಿದೆ. ಆದರೆ, ಇಬ್ಬರು ಆರಂಭಿಕರ ಪೈಕಿ ಒಬ್ಬರು ಮಿಂಚುವ ಕಾರಣ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಿದ್ದು ತಂಡಕ್ಕೆ ಲಾಭ ತಂದಿದೆ. ಕಾಲಿನ್ ಇನ್​ಗ್ರಾಮ್ ಬದಲು ತಂಡ ಸೇರಿಕೊಂಡ ಮುನ್ರೊ ಉತ್ತಮವಾಗಿ ಆಡಿದ್ದಾರೆ. ತಂಡದಲ್ಲಿ ಬದಲಾವಣೆ ಸಾಧ್ಯತೆ ಬಹಳ ಕಡಿಮೆ.

ಬಲ: ಸಮತೋಲಿತ ತಂಡ; ಕಗಿಸೊ ರಬಾಡ ಬೌಲಿಂಗ್; ಮಧ್ಯಮ ಕ್ರಮಾಂಕದ ಬ್ಯಾಟಿಂಗ್.

ದೌರ್ಬಲ್ಯ: ದಿಢೀರ್ ಕುಸಿಯುವ ತಂಡ; ಆರಂಭಿಕ ಜೋಡಿಯ ಬ್ಯಾಟಿಂಗ್; ಸ್ಪಿನ್ ಬೌಲಿಂಗ್ ವಿಭಾಗ.

ಕಳೆದ ಪಂದ್ಯ: ಸನ್​ರೈಸರ್ಸ್ ವಿರುದ್ಧ 39 ರನ್ ಜಯ.

ಮುಂಬೈ ಇಂಡಿಯನ್ಸ್: ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮುಂಬೈ ತಂಡವನ್ನು ಬಲಿಷ್ಠವಾಗಿ ನಿಲ್ಲಿಸಿದೆ. ಪಾಂಡ್ಯ ಸಹೋದರರೊಂದಿಗೆ, ಕೈರಾನ್ ಪೊಲ್ಲಾರ್ಡ್ ಹಾಗೂ ಯುವ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಇಲ್ಲಿ ಆಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಾಲಿಂಗ ನಾಲ್ಕು ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಆ ಕಾರಣಕ್ಕಾಗಿ ತಂಡದಲ್ಲಿ ಬದಲಾವಣೆ ಅನುಮಾನ.

ಬಲ: ಬಲಿಷ್ಠ ಮಧ್ಯಮ ಕ್ರಮಾಂಕ; ಬೌಲಿಂಗ್ ವಿಭಾಗದ ನಿರ್ವಹಣೆ; ಕೈರಾನ್ ಪೊಲ್ಲಾರ್ಡ್ ಫಾಮ್ರ್.

ದೌರ್ಬಲ್ಯ: ರೋಹಿತ್ ಶರ್ಮ ಫಾಮ್ರ್; ಕ್ಲಿಕ್ ಆಗದ ಸ್ಪಿನ್ ಬೌಲಿಂಗ್ ವಿಭಾಗ.

ಕಳೆದ ಪಂದ್ಯ: ಆರ್​ಸಿಬಿ ವಿರುದ್ಧ 5 ವಿಕೆಟ್ ಜಯ.