ಡೆಲ್ಲಿ ಕ್ಯಾಪಿಟಲ್ಸ್​ಗೆ ಗಂಗೂಲಿ ಮೆಂಟರ್

ನವದೆಹಲಿ: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಿನ ವಾರ ಆರಂಭಗೊಳ್ಳಲಿರುವ ಐಪಿಎಲ್ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಈಗಾಗಲೆ ತಂಡದ ಮುಖ್ಯ ಕೋಚ್ ಆಗಿರುವ ಆಸೀಸ್ ದಿಗ್ಗಜ ಬ್ಯಾಟ್ಸ್​ಮನ್ ರಿಕಿ ಪಾಂಟಿಂಗ್ ಅವರೊಂದಿಗೆ ಗಂಗೂಲಿ ಸುಮಾರು 11 ವರ್ಷಗಳ ನಂತರ ಮತ್ತೆ ಜಂಟಿಯಾಗಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2008ರಲ್ಲಿ ಗಂಗೂಲಿ ಮತ್ತು ಪಾಂಟಿಂಗ್ ಕೋಲ್ಕತ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಆದರೆ ಪಾಂಟಿಂಗ್ ಕೆಕೆಆರ್ ಪರ ಆಡಿದ 4 ಪಂದ್ಯಗಳಲ್ಲಿ ಕೇವಲ 39 ರನ್ ಗಳಿಸಿದ್ದರಿಂದ ಐಪಿಎಲ್​ನಲ್ಲಿ ಗಂಗೂಲಿ ಜತೆ ಆಟಗಾರನಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಗಂಗೂಲಿ ಕೂಡ ಏಳು ವರ್ಷಗಳ ಬಳಿಕ ಐಪಿಎಲ್ ಫ್ರಾಂಚೈಸಿ ಪರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2012ರಲ್ಲಿ ಪುಣೆ ವಾರಿಯರ್ಸ್ ತಂಡದ ಪರ ಕೊನೇ ಬಾರಿ ಆಟಗಾರನಾಗಿ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಡೆಲ್ಲಿ ಸಿಬ್ಬಂದಿ ವಿಭಾಗದಲ್ಲಿ ಗಂಗೂಲಿ ಅವರ ಸೇರ್ಪಡೆಯಂತೆ ಪಾಂಟಿಂಗ್, ಸಹಾಯಕ ಕೋಚ್ ಮೊಹಮದ್ ಕೈಫ್, ಟ್ಯಾಲೆಂಟ್ ಸ್ಕೌಟ್ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಜೇಮ್್ಸ ಹೋಪ್ ಕೂಡ ಇದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 24ರಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಐಪಿಎಲ್

ಅಭಿಯಾನ ಆರಂಭಿಸಲಿದೆ.

ಸ್ವಹಿತಾಸಕ್ತಿ ಸಮಸ್ಯೆಯಿಲ್ಲ: ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮೆಂಟರ್ ಆಗುವುದು ಸ್ವಹಿತಾಸಕ್ತಿ ಎನಿಸಲಿದೆ ಎನ್ನುವ ಪ್ರಶ್ನೆ ಉದ್ಭವಿಸುವಾಗಲೇ ಗಂಗೂಲಿ ಇದಕ್ಕೆ ಉತ್ತರ ನೀಡಿದ್ದಾರೆ. ‘ಐಪಿಎಲ್ ಆಡಳಿತ ಸಮಿತಿಯ ಸ್ಥಾನಕ್ಕೆ ಈಗಾಗಲೇ ನಾನು ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಇದು ಖಂಡಿತಾ ಸ್ವಹಿತಾಸಕ್ತಿ ಸಂಘರ್ಷ ಆಗುವುದಿಲ್ಲ. ಈ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೆ ಡೆಲ್ಲಿ ತಂಡದ ಸಲಹೆಗಾರನ ಹುದ್ದೆ ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಕಮಲೇಶ್ ಬದಲು ಸಂದೀಪ್

ಪಾದದ ಗಾಯದಿಂದಾಗಿ ಹಲವು ತಿಂಗಳುಗಳಿಂದ ಹೊರಗುಳಿದಿರುವ ಕಿರಿಯ ವೇಗಿ ಕಮಲೇಶ್ ನಾಗರ್​ಕೋಟಿ ಇನ್ನೂ ಫಿಟ್ ಆಗದಿರುವ ಕಾರಣ ಅವರ ಸ್ಥಾನಕ್ಕೆ ಕೆಕೆಆರ್ ಕೇರಳ ವೇಗಿ ಸಂದೀಪ್ ವಾರಿಯರ್​ರನ್ನು ಸೇರ್ಪಡೆಗೊಳಿಸಿದೆ. ಇನ್ನೋರ್ವ ವೇಗಿ ಶಿವಂ ಮಾವಿ ಕೂಡ ಗಾಯದಿಂದ ಹೊರಬಿದ್ದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಈಗಾಗಲೆ 8 ವಿಕೆಟ್ ಕಬಳಿಸಿ ಮಿಂಚಿರುವ ಸಂದೀಪ್ ಕಳೆದ ಹರಾಜು ಪ್ರಕ್ರಿಯೆಯಲ್ಲಿ ಸೇಲ್ ಆಗಿರಲಿಲ್ಲ. 19 ವರ್ಷದ ಕಮಲೇಶ್ ಕಳೆದ ಕಿರಿಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ ಬೆನ್ನಲ್ಲೆ ಹಿಂದಿನ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್​ಗೆ ಆಯ್ಕೆಯಾದರೂ, ಅಭ್ಯಾಸದ ವೇಳೆ ಆದ ಗಾಯದಿಂದಾಗಿ ಆ ನಂತರ ಒಮ್ಮೆಯೂ ಕಣಕ್ಕಿಳಿಯಲು ಸಾಧ್ಯವಾಗಿಲ್ಲ.