ನೂರು ರೂ. ಮೌಲ್ಯದ ಡ್ರೆಸ್ ತೆಗೆದುಕೊಂಡಿದ್ದಕ್ಕೆ ಹಿರಿಯ ಸೋದರಿಯ ಕಣ್ಣುಗಳನ್ನೇ ಕಿತ್ತುಹಾಕಿದ ಬಾಲಕ​​ !

ನವದೆಹಲಿ: ತನ್ನ ಹಿರಿಯ ಸಹೋದರಿಯೊಬ್ಬಳು ನೂರು ರೂ. ಮೌಲ್ಯದ ಉಡುಪು ಖರೀದಿಸಿದ್ದಕ್ಕೆ ಸಿಟ್ಟಿಗೆದ್ದ 17 ವರ್ಷದ ಬಾಲಕ ಆಕೆಯ ಕಣ್ಣುಗಳನ್ನೇ ಹೊರಗೆ ಕಿತ್ತಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ದೆಹಲಿಯ ಮಹಿಳಾ ಆಯೋಗ ತಿಳಿಸಿದೆ.

ಬಿಹಾರದಿಂದ ಬಂದಿರುವ ಕುಟುಂಬ ದೆಹಲಿಯ ದ್ವಾರಕ ಬಳಿ ವಾಸವಿದೆ. 20 ವರ್ಷದ ಸಂತ್ರಸ್ತೆಯನ್ನು ದೆಹಲಿ ಮಹಿಳಾ ಆಯೋಗ ಮಂಗಳವಾರ ರಕ್ಷಣೆ ಮಾಡಿದೆ. ಮನೆ ಮನೆಗೂ ಭೇಟಿ ನೀಡುವ ವೇಳೆ ಮನೆಯ ಒಳಗಿನಿಂದ ಬರುತ್ತಿದ್ದ ಅಳುವ ಧ್ವನಿಯನ್ನು ಮಹಿಳಾ ಆಯೋಗ್ಯ ಸದಸ್ಯರರಾಗಿರುವ ಸ್ಥಳೀಯ ಮಹಿಳಾ ಪಂಚಾಯತ್​ ತಂಡ ಕೇಳಿಸಿಕೊಂಡಿದೆ. ಬಳಿಕ ಅವರು ಹೋಗಿ ನೋಡುವ ವೇಳೆ ಬಾಲಕನ ಕ್ರೂರತ್ವ ಅವರಿಗೆ ದರ್ಶನವಾಗಿದೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಣೆ ಮಾಡಿದಾಗ ಬಾಲಕ, ಸೋದರಿಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಬಾಲಕನ ಕ್ರೂರತ್ವ ನೋಡಿದ ಬಳಿಕ ಮಹಿಳಾ ಪಂಚಾಯತ್ ತಂಡ​ ತಕ್ಷಣ ಮಹಿಳಾ ಆಯೋಗದ ಕಚೇರಿಗೆ ಕರೆ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ಬರುವಂತೆ ಮನವಿ ಮಾಡಿಕೊಂಡಿದೆ. ಯುವತಿಯರಿದ್ದ ಮನೆಗೆ ಪ್ರವೇಶಿಸಲು ಯತ್ನಿಸಿದಾಗ ಆಯೋಗದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಾಲಕ, ಒಳಗೆ ಬಂದರೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೇಗೋ ಮನೆಯೊಳಗೆ ಹೋದ ಸದಸ್ಯರು ನೆಲದ ಮೇಲೆ ಬಿದ್ದಿದ್ದ ಯುವತಿಯ ಸ್ಥಿತಿ ಕಂಡು ಆಘಾತಗೊಂಡಿದ್ದಾರೆ. ಈ ವೇಳೆ ಯುವತಿಗೆ ಮುಖದ ತುಂಬೆಲ್ಲಾ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು ಎಂದು ಸದಸ್ಯರು ತಿಳಿಸಿದ್ದಾರೆ.

ಗಂಭೀರ ಗಾಯಗಳಾಗಿದ್ದರೂ ಯುವತಿಯನ್ನು ಮನೆಯೊಳಗೆ ಕೂಡಿ ಹಾಕಿ ಆಕೆಗೆ ಯಾವುದೇ ವೈದ್ಯಕೀಯ ನೆರವು ನೀಡದಂತೆ ಸೋದರ ಹಿಂಸೆ ನೀಡಿದ್ದಾನೆ. ಬಳಿಕ ಆಕೆಯನ್ನು ಮಹಿಳಾ ಆಯೋಗದ ಸದಸ್ಯರು ಸಫ್ದಾರ್​ಜಂಗ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವಳ ಸ್ಥಿತಿ ಗಂಭೀರವಾಗಿದೆ.

ಇದೇ ಮೊದಲಲ್ಲದೆ, ದಿನನಿತ್ಯವು ತನ್ನ ಸಹೋದರಿಯರ ಮೇಲೆ ಬಾಲಕ ದಾಳಿ ಮಾಡುತ್ತಿದ್ದನಂತೆ. ತನ್ನ ಇಬ್ಬರು ಕಿರಿಯ ಸೋದರಿಯರ ಮೇಲೆ ಬಾಲಕ ನಿರಂತರವಾಗಿ ಥಳಿಸಿದ್ದಾನೆ. ಈ ಬಗ್ಗೆ 8 ವರ್ಷದ ಸೋದರಿ ಮಹಿಳಾ ಆಯೋಗದ ಸದಸ್ಯರ ಮಂದೆ ತಿಳಿಸಿದ್ದಾಳೆ. ಅಲ್ಲದೆ, ಬಾಲಕ ಹಲ್ಲೆ ಮಾಡಿರುವ ಗುರುತುಗಳು ಸೋದರಿಯರ ಕೈ ಮೇಲೆ ಹಾಗೇ ಇರುವುದಾಗಿ ಮಹಿಳಾ ಆಯೋಗ ಮಾಹಿತಿ ನೀಡಿದೆ.

ಘಟನೆ ವೇಳೆ ಬಿಹಾರದಲ್ಲಿದ್ದ ಯುವತಿಯ ಪಾಲಕರಿಗೆ ಮಾಹಿತಿ ತಿಳಿಸಿದ್ದು, ದೆಹಲಿಗೆ ಆಗಮಿಸಿರುವ ಅವರು ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್​ ಠಾಣೆಗೆ ಮಹಿಳಾ ಆಯೋಗ ಮಾಹಿತಿ ನೀಡಿದ್ದು, ಅಪ್ರಾಪ್ತ ಬಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *