ಕೇಂದ್ರ ಸಚಿವರ ಎದುರಿಗೆ ಹೆಂಡತಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ನಾಯಕನಿಗೆ ಕೊನೆಗೂ ಸಿಕ್ತು ಶಿಕ್ಷೆ! ವಿಡಿಯೋ ವೈರಲ್‌

ನವದೆಹಲಿ: ಮೆಹ್ರೂಲಿ ಜಿಲ್ಲೆಯ ಬಿಜೆಪಿ ಮುಖ್ಯಸ್ಥ ಆಜಾದ್‌ ಸಿಂಗ್ ಅವರು ಪತ್ನಿ, ದಕ್ಷಿಣ ದೆಹಲಿಯ ಮಾಜಿ ಮೇಯರ್‌ಗೆ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದ್ದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರೊಂದಿಗಿನ ಸಭೆಯಲ್ಲಿಯೇ ಕಪಾಳಮೋಕ್ಷ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಿಂಗ್‌ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಅಂಗವಾಗಿ ದೆಹಲಿ ಬಿಜೆಪಿ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅವರು ಪಂತ್‌ ಮಾರ್ಗ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದರು. ಈ ವೇಳೆ ಸಭೆಯಲ್ಲೇ ಇಬ್ಬರ ನಡುವೆ ಜಗಳವಾಗಿದೆ.

ಹಲವು ವರ್ಷಗಳಿಂದಲೂ ಇಬ್ಬರ ನಡುವೆ ವೈವಾಹಿಕ ಮನಸ್ತಾಪವಿತ್ತು. ಆದರೆ ಹೀಗೆ ಪಕ್ಷದ ಕಚೇರಿಯಲ್ಲೇ ಇಬ್ಬರು ಜಗಳವಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಹಿರಿಯ ನಾಯಕರು ತಿಳಿಸಿದ್ದಾರೆ.

ಘಟನೆ ಬಳಿಕ ಮೆಹ್ರೂಲಿ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಸಿಂಗ್‌ ಅವರನ್ನು ತೆಗೆಯಲಾಗಿದ್ದು, ವಿಕಾಸ್‌ ತನ್ವರ್‌ ಎಂಬುವರನ್ನು ಜಿಲ್ಲೆಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ತನ್ನ ಹೆಂಡತಿ ಮತ್ತು ದಕ್ಷಿಣ ದೆಹಲಿ ಮಾಜಿ ಮೇಯರ್‌ ಸರಿತಾ ಚೌಧರಿಯೊಂದಿಗೆ ಸಿಂಗ್ ಮನಸ್ತಾಪವನ್ನು ಹೊಂದಿದ್ದರು. ಹಾಗಾಗಿ ಅವರು ಹೆಂಡತಿಯೊಂದಿಗೆ ಜಗಳಕ್ಕಿಳಿದರು. ಘಟನೆ ನಡೆದ ವೇಳೆ ಪ್ರಕಾಶ್‌ ಜಾವಡೇಕರ್‌ ಕೂಡ ಪಕ್ಷದ ಕಚೇರಿಯಲ್ಲಿ ಹಾಜರಿದ್ದರು ಎಂದು ಪ್ರತ್ಯಕ್ಷದರ್ಶಿ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಂಗ್, ತಾನು ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆಕೆಯೇ ಮೊದಲು ನನ್ನನ್ನು ನಿಂದಿಸಿದಳು ಮತ್ತು ದಾಳಿ ನಡೆಸಿದಳು. ಇದರಿಂದ ಆತ್ಮರಕ್ಷಣೆಗಾಗಿ ನಾನು ಆಕೆಯನ್ನು ಹಿಂದೆ ತಳ್ಳಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *