ವಿಜಯನಗರ ಜಿಲ್ಲೆ ರಚನೆಗೆ ಆಗ್ರಹಿಸಿ ಬೆಂಗಳೂರಿಗೆ ತೆರಳಿದ ನಿಯೋಗ

ಹೊಸಪೇಟೆ: ವಿಜಯನಗರ ಜಿಲ್ಲೆ ಘೋಷಿಸುವಂತೆ ಆಗ್ರಹಿಸಿ ಮಾಜಿ ಸಚಿವ ಆನಂದ್ ಸಿಂಗ್ ನೇತೃತ್ವದ ನಿಯೋಗ ಇಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರು, ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಸೇರಿದಂತೆ ಹಲವರು ತೋರಣಗಲ್ ನ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಎರಡು ವಿಶೇಷ ವಿಮಾನಗಳ ಮೂಲಕ ತೆರಳಿದರು.

ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಉಜ್ಜಯಿನಿ ಜಗದ್ಗುರುಗಳು, ವಿಜಯನಗರ ಜಿಲ್ಲೆ ಘೋಷಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಈ ಹಿಂದೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ರಾಜ್ಯದಲ್ಲಿ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಹೂವಿನಹಡಗಲಿ ಸೇರಿದಂತೆ ಇತರ ತಾಲೂಕುಗಳ ಗ್ರಾಮಗಳು ಜಿಲ್ಲಾ ಕೇಂದ್ರದಿಂದ 153 ಕಿಮೀ.ಗೂ ಹೆಚ್ಚು ಅಂತರದಲ್ಲಿ ಇವೆ. ಜಿಲ್ಲಾ ಕೇಂದ್ರಕ್ಕೆ ಜನರು ಹೋಗಿ ಬರುವುದು ಕಷ್ಟವಾಗುತ್ತಿದೆ. ಅಲ್ಲದೆ, ಆರ್ಥಿಕವಾಗಿಯೂ ಹೊರೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ವಿಜಯ ನಗರ ಜಿಲ್ಲೆಯಾಗಬೇಕೆಂಬುದು ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿದೆ. ವಿಜಯ ನಗರ ಸಾಮ್ರಾಜ್ಯದ ನೆನಪಿಗಾಗಿ ವಿಜಯನಗರ ಹೆಸರಿನಲ್ಲಿ ಜಿಲ್ಲೆ ರಚಿಸಬೇಕು. ಪಕ್ಷಾತೀತವಾಗಿ ಸಿಎಂರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ಭಾವಿಸಿದ್ದೇವೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು ಸೇರಿ ಜಿಲ್ಲೆ ರಚಿಸಿದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಶಾಸಕ ಆನಂದ್ ಸಿಂಗ್ ಬೆಂಗಳೂರಿನಲ್ಲೇ ಇದ್ದು, ಹೊಸಪೇಟೆಯಿಂದ ಆಗಮಿಸುವ ನಿಯೋಗದ ಜತೆ ಸಿಎಂ ಯಡಿಯೂರಪ್ಪ ಅವರನ್ನು ಗೃಹಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.

ನಿಯೋಗದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಮಾಜಿ ಸಚಿವರು, ವಿವಿಧ ಸಂಘಟನೆಗಳ ಮುಖಂಡರು ಇದ್ದಾರೆ.

Leave a Reply

Your email address will not be published. Required fields are marked *