ಮಂಗಳೂರು ವಿವಿ ಪದವಿ ಸರ್ಟಿಫಿಕೆಟ್ ವಿತರಣೆ ವಿಳಂಬ

<ಚಿಪ್ ಆಧಾರಿತ ಸರ್ಟಿಫಿಕೆಟ್‌ಗೆ ಸರ್ಕಾರದ ತಡೆಯಾಜ್ಞೆ>

ವೇಣುವಿನೋದ್ ಕೆ.ಎಸ್. ಮಂಗಳೂರು
ಮಂಗಳೂರು ವಿಶ್ವವಿದ್ಯಾಲಯದಲ್ಲಿ 2017-18ರಲ್ಲಿ ಪದವಿ ಪೂರೈಸಿದ ಹಲವು ವಿದ್ಯಾರ್ಥಿಗಳಿಗೆ ಇನ್ನೂ ಪ್ರಮಾಣ ಪತ್ರ ಲಭಿಸಿಲ್ಲ. ಪರಿಣಾಮ ಉದ್ಯೋಗ ಸಹಿತ ಇನ್ನಿತರ ಪ್ರಕ್ರಿಯೆಗಳಿಗೆ ಸಮಸ್ಯೆಯಾಗುತ್ತಿದೆ.

ಪದವಿ ಪೂರೈಸಿದ ಬಳಿಕ ನಿಗದಿತ ಶುಲ್ಕ 800 ರೂ.ನಷ್ಟು ಪಾವತಿಸಿ ಇಷ್ಟು ಸಮಯವಾಗಿದೆ, ಆದರೆ ಪದವಿ ಪ್ರಮಾಣ ಪತ್ರವನ್ನು ವಿಶ್ವವಿದ್ಯಾಲಯ ಕಳುಹಿಸಿಕೊಟ್ಟಿಲ್ಲ, ಈ ಬಗ್ಗೆ ವಿಚಾರಿಸಿದಾಗಲೂ ಕಚೇರಿಯಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ನಿಗದಿಯಂತೆ ಅರ್ಜಿ ಸಲ್ಲಿಕೆಯಾದ 3 ತಿಂಗಳಲ್ಲಿ ಪದವಿ ಪ್ರಮಾಣ ಪತ್ರ ಕಳುಹಿಸಬೇಕೆಂಬ ನಿಯಮವಿದೆ, ಆದರೆ ಘಟಿಕೋತ್ಸವ ಮುಗಿದು 10 ತಿಂಗಳೇ ಆದರೂ ಇನ್ನೂ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಸಿಕ್ಕಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.

ಚಿಪ್‌ಕಾರ್ಡ್ ಸ್ಥಗಿತ: ಚಿಪ್ ಹೊಂದಿರುವ ಪ್ರಮಾಣಪತ್ರ ಕೊಡುವುದಕ್ಕೆ ಈ ಮೊದಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿತ್ತು, ಆದರೆ ಇದಕ್ಕೆ ರಾಜ್ಯ ಸರ್ಕಾರ ತಡೆ ಹೇರಿದೆ. ಹಾಗಾಗಿಯೂ ಒಂದಷ್ಟು ಕಾಲ ಈ ಪ್ರಕ್ರಿಯೆಗಳಿಂದಾಗಿ ತಡವಾಗಿದೆ ಎನ್ನುತ್ತವೆ ಮಂಗಳೂರು ವಿವಿ ಮೂಲಗಳು.

ಫೋರ್ಜರಿ ತಡೆಯುವ ಉದ್ದೇಶದಿಂದ 2017ರಲ್ಲೇ ಮಾರ್ಕ್ ಕಾರ್ಡ್ ಮತ್ತು ಪದವಿ ಪ್ರಮಾಣಪತ್ರಗಳನ್ನು ಚಿಪ್ ಆಧಾರಿತವಾಗಿ ಮಾಡುವುದಕ್ಕೆ (ಸಮೀಪ ಕ್ಷೇತ್ರೀಯ ಸಂವಹನ-ಎನ್‌ಎಫ್‌ಸಿ ಎನೇಬಲ್ಡ್) ವಿಶ್ವವಿದ್ಯಾಲಯ ತೀರ್ಮಾನಿಸಿತ್ತು. ಇದಕ್ಕಾಗಿ 3 ಕೋಟಿ ರೂ. ಟೆಂಡರ್ ನೀಡುವುದಕ್ಕೂ ಮುಂದಾಗಿತ್ತು. ಆದರೆ ಈ ನಡುವೆ ಇಷ್ಟು ಮೊತ್ತ ವ್ಯಯ ಮಾಡುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡದೆ ತಡೆ ಹಿಡಿದ ಕಾರಣ ಪ್ರಕ್ರಿಯೆಗೆ ಸ್ಥಗಿತಗೊಂಡಿತ್ತು.

ಆ ಬಳಿಕ ಹಿಂದಿನಂತೆಯೇ ವಿಶ್ವವಿದ್ಯಾಲಯ ಸಾಮಾನ್ಯ ನಮೂನೆಯಲ್ಲೇ ಪ್ರಮಾಣಪತ್ರ, ಅಂಕಪಟ್ಟಿಗಳನ್ನು ಮುದ್ರಿಸಲಾಗುತ್ತಿದೆ. ಫೆಬ್ರವರಿ 26, 2018ರಲ್ಲಿ ಘಟಿಕೋತ್ಸವ ನಡೆದಿದ್ದು, ನಿಗದಿತ ಮಂದಿಗೆ ಅಲ್ಲಿ ಪ್ರಮಾಣ ಪತ್ರ ವಿತರಿಸಲಾಗಿದೆ. ಆ ಬಳಿಕ ಸಾಕಷ್ಟು ಮಂದಿಗೆ ಪ್ರಮಾಣ ಪತ್ರ ನೀಡುವುದು ಬಾಕಿ ಉಳಿದಿದೆ.

ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಒಂದಷ್ಟು ವಿಳಂಬ ಆಗಿರುವುದು ಹೌದು, ಆದರೆ ಯಾರಿಗೆ ಅಗತ್ಯವಿದೆಯೋ ಅವರಿಗೆ ತುರ್ತಾಗಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ, ಕಚೇರಿಯಲ್ಲಿ ಸ್ಪಂದನೆ ಸಿಗದಿದ್ದರೆ ಅಂತಹವರು ನನ್ನನ್ನು ಸಂಪರ್ಕಿಸಲಿ.
– ಡಾ.ಎ.ಎಂ.ಖಾನ್, ರಿಜಿಸ್ಟ್ರಾರ್, ಮಂಗಳೂರು ವಿವಿ

ಪಾಸ್‌ಪೋರ್ಟ್, ಉದ್ಯೋಗಕ್ಕೆ ಅಗತ್ಯವಾಗಿ ಪ್ರಮಾಣಪತ್ರ ಬೇಕಾಗುತ್ತದೆ, ಈ ಬಾರಿ ಮಂಗಳೂರು ವಿವಿ ಸರ್ಟಿಫಿಕೇಟ್ ಕೊಡುವುದು ತುಂಬಾನೇ ತಡವಾಗಿದೆ, ಇದರಿಂದಾಗಿ ಸಮಸ್ಯೆಯಾಗಿದೆ.
– ನೊಂದ ವಿದ್ಯಾರ್ಥಿ ಪೋಷಕರು