ಮರಳುಗಾರಿಕೆ ವಿಳಂಬ ಸಚಿವೆ ಜಯಮಾಲ ಅಸಮಾಧಾನ

ಉಡುಪಿ: ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ವಿಳಂಬವಾಗಿದ್ದು, ಮರಳುಗಾರಿಕೆ ಶೀಘ್ರ ಆರಂಭಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಉಸ್ತುವಾರಿ ಸಚಿವೆಯಾಗಿ ನಾನು ಸೂಚಿಸಿದ್ದೇನೆ, ಇಲ್ಲಿನ ಶಾಸಕರು ಒತ್ತಾಯಿಸಿದ್ದಾರೆ. ಆದರೆ ಡಿಸಿ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅಸಮಾಧಾನ ವ್ಯಕ್ತಪಡಿಸಿದರು.
ಮರಳುಗಾರಿಕೆಗೆ ಸಂಬಂಧಿಸಿ ಭಾನುವಾರ ಸರ್ಕೀಟ್ ಹೌಸ್‌ನಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಮರಳುಗಾರಿಕೆ ವಿಚಾರದಲ್ಲಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕಾರ್ಯವೈಖರಿಗೆ ಗರಂ ಆದರು. ಡಿಸಿ ಮರಳುಗಾರಿಕೆ ಸಂಬಂಧಿಸಿ ಸಹಾಯಕ ಆಯುಕ್ತರಿಗೆ ಸರ್ವೇ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ವೇ ಮೇಲೆ ಸರ್ವೇ ಮಾಡುತ್ತ ವಿಳಂಬ ಮಾಡಿದರೇ ಜನರಿಗೆ ಮರಳು ಎಲ್ಲಿಂದ ಕೊಡುವುದು. ಜನರ ಸಮಸ್ಯೆ ನಮಗೆ ಅರ್ಥವಾಗುತ್ತಿದೆ, ಜನರಿಗೆ ಏನೆಂದು ಉತ್ತರಿಸುವುದು, ನಮಗೂ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ತಕ್ಷಣ ಮರಳುಗಾರಿಕೆ ಪ್ರಕ್ರಿಯೆ ಆರಂಭಿಸಲು ಬೇಕಾದ ಸಿದ್ಧತೆ ಮಾಡಿಕೊಡುವಂತೆ ಡಿಸಿಗೆ ಸೂಚಿಸುತ್ತೇನೆ ಎಂದರು.

ಅಹೋರಾತ್ರಿ ಧರಣಿ ಎಚ್ಚರಿಕೆ: ಗುರುವಾರದೊಳಗೆ ಮರಳುಗಾರಿಕೆ ಸರ್ವೇ ಆರಂಭಿಸದೇ ಇದ್ದರೇ ಜಿಲ್ಲೆಯ ಶಾಸಕರು, ಎಲ್ಲ ರಾಜಕೀಯ ಪಕ್ಷದವರು, ನಾಗರಿಕರು ಸೇರಿ ಅಹೋರಾತ್ರಿ ಧರಣಿ ನಡೆಸುವುದಾಗಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಸಂಬಂಧಿತ ಇಲಾಖೆ ಅಧಿಕಾರಿಗಳ ನಿರ್ಲಕ್ಯ್ಷದಿಂದ ಮರಳು ದಿಣ್ಣೆ ಗುರುತಿಸುವ ಕೆಲಸ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ 3 ಸಾವಿರ ಬಸವ ವಸತಿ ಮನೆಗಳು ಮಂಜೂರಾಗಿದ್ದು, ಮನೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಬಡವರಿಗೆ ಮನೆಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಒಳಗೆ ಎನ್‌ಐಟಿಕೆ ಮುಖೇನ ಸರ್ವೇ ಆರಂಭವಾಗಬೇಕು. ಇಲ್ಲದಿದ್ದರೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದರು.