More

    ಉಪಾಂತ್ಯಕ್ಕೇರಲು ತ್ರಿಕೋನ ಪೈಪೋಟಿ: ವಿಂಡೀಸ್-ಆಫ್ರಿಕಾ ಪಂದ್ಯ ನಿರ್ಣಾಯಕ

    ಬ್ರಿಜ್‌ಟೌನ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉಪಾಂತ್ಯಕ್ಕೇರಲು ಸೂಪರ್-8 ಹಂತದ ಗ್ರೂಪ್-2ರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್, ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಅಜೇಯ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ. ಇಂಗ್ಲೆಂಡ್ ತಂಡ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಜಂಟಿ ಆತೀಥೆಯ ಅಮೆರಿಕ ತಂಡವನ್ನು ಎದುರಿಸಲಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಜೋಸ್ ಬಟ್ಲರ್ ಬಳಗ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಲಿದೆ.

    ಅಮೆರಿಕ ಎದುರು ಭಾರಿ ಅಂತರದಲ್ಲಿ ಗೆಲುವು ದಾಖಲಿಸಿದರೆ ಆಂಗ್ಲರ ಸೆಮೀಸ್ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಒಂದು ವೇಳೆ ಅಮೆರಿಕ ತಂಡ ಪೈಪೋಟಿ ನೀಡಿದರೆ, ಸೋಮವಾರ ನಡೆಯಲಿರುವ ದ.ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಕಾದಾಟದಲ್ಲಿ ಇಂಗ್ಲೆಂಡ್ ಭವಿಷ್ಯ ನಿರ್ಧಾರವಾಗಲಿದೆ. ಮೂರು ತಂಡಗಳ ಸೆಮೀಸ್ ಹಾದಿಯ ಲೆಕ್ಕಾಚಾರ ಇಲ್ಲಿದೆ.

    ಇಂಗ್ಲೆಂಡ್ ಹಾಗೂ ವಿಂಡೀಸ್ ಹಾದಿ: ಸೂಪರ್-8 ಹಂತದಲ್ಲಿ ಆಡಿರುವ 2 ಪಂದ್ಯಗಳಲ್ಲಿ ತಲಾ 1 ಗೆಲುವು ದಾಖಲಿಸಿರುವ ವೆಸ್ಟ್ ಇಂಡೀಸ್ (+1.814) ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ (+0.412) ಗ್ರೂಪ್-2ರ ಅಂಕಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. 2 ಗೆಲುವಿನೊಂದಿಗೆ ದ.ಆಫ್ರಿಕಾ ಅಗ್ರಸ್ಥಾನಲ್ಲಿದೆ. ಸೂಪರ್-8 ಹಂತದ ತನ್ನ ಕೊನೇ ಲೀಗ್ ಪಂದ್ಯಗಳಲ್ಲಿ ದ.ಆಫ್ರಿಕಾ (+0.625) ಎದುರು ವಿಂಡೀಸ್, ಅಮೆರಿಕ ಎದುರು ಇಂಗ್ಲೆಂಡ್ ತಂಡಗಳು ಗೆಲುವು ದಾಖಲಿಸಿದರೆ, ಆಗ ಮೂರು ತಂಡಗಳು ತಲಾ 4 ಅಂಕ ಕಲೆಹಾಕಲಿದ್ದು, ಉತ್ತಮ ರನ್‌ರೇಟ್ ಹೊಂದಿರುವ 2 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಲಿವೆ. ಒಂದು ವೇಳೆ ಇಂಗ್ಲೆಂಡ್ ತಂಡ ಅಮೆರಿಕ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾವನ್ನು ರನ್‌ರೇಟ್‌ನಲ್ಲಿ ಹಿಂದಿಕ್ಕಿದರೆ, ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ನಾಕೌಟ್ ಎನಿಸಲಿದೆ. ಗೆದ್ದ ತಂಡ ಸೆಮೀಸ್‌ಗೇರಿದರೆ, ಸೋತವರು ನಿರ್ಗಮಿಸಲಿದ್ದಾರೆ. ವಿಂಡೀಸ್ ಮತ್ತು ಇಂಗ್ಲೆಂಡ್ ಎರಡೂ ಕೊನೇ ಪಂದ್ಯದಲ್ಲಿ ಸೋತರೆ ಆಗ ವಿಂಡೀಸ್, ಇಂಗ್ಲೆಂಡ್ ಮತ್ತು ಅಮೆರಿಕ ಈ 3 ತಂಡಗಳು ತಲಾ ಎರಡು ಪಾಯಿಂಟ್ ಹೊಂದಲಿವೆ. ಆಗಲೂ ಈ ಪೈಕಿ ಒಂದು ತಂಡ ಸೆಮೀಸ್‌ಗೇರಲು ರನ್‌ರೇಟ್ ಲೆಕ್ಕಾಚಾರ ಪ್ರಮುಖವಾಗಲಿದೆ.

    See also  ಪಾಕ್ ಕ್ಯಾತೆಗೆ ತಿರುಗೇಟು ಕೊಟ್ಟ ಭಾರತೀಯ ಸೇನೆ

    ಅಜೇಯ ಆಫ್ರಿಕಾಕ್ಕೂ ಅಪಾಯ: ಟೂರ್ನಿಯಲ್ಲಿ ಸತತ 6 ಪಂದ್ಯ ಗೆದ್ದು ಅಜೇಯವಾಗಿರುವ ದಕ್ಷಿಣ ಆಫ್ರಿಕಾ ಸೂಪರ್-8 ಹಂತದ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಎದುರು ಸೋಲು ಅನುಭವಿಸಿದರೆ ಟೂರ್ನಿಯಿಂದಲೇ ಹೊರಬೀಳುವ ಅಪಾಯ ಹೊಂದಿದೆ. ವಿಂಡೀಸ್ ವಿರುದ್ಧ ಗೆಲುವು ಕಂಡರೆ ಅಥವಾ ಪಂದ್ಯ ಮಳೆಗೆ ಆಹುತಿಯಾದರೆ ಹರಿಣಗಳು ಸೆಮಿೈನಲ್‌ಗೇರಲಿದ್ದಾರೆ. ಒಂದು ವೇಳೆ ಸೂಪರ್ ಓವರ್‌ನಲ್ಲಿ ವಿಂಡೀಸ್ ಎದುರು ಸೋತು, ಅಮೆರಿಕ ಎದುರು ಇಂಗ್ಲೆಂಡ್ 10 ರನ್‌ಗಳಿಂದ ಅಥವಾ ಕನಿಷ್ಠ ಒಂದು ಓವರ್ ಬಾಕಿ ಇರುವಂತೆಯೆ (ಮೊದಲು ಬ್ಯಾಟಿಂಗ್ ಮಾಡಿದ ತಂಡ 160 ರನ್ ಗಳಿಸಿದರೆ) ಗೆದ್ದರೂ ದಕ್ಷಿಣ ಆಫ್ರಿಕಾ ಸೆಮೀಸ್ ಕನಸು ಭಗ್ನಗೊಳ್ಳಲಿದೆ.

    ಇಂದಿನ ಪಂದ್ಯಗಳು
    ಅ್ಘಾನಿಸ್ತಾನ- ಆಸ್ಟ್ರೇಲಿಯಾ
    ಗ್ರೂಪ್-1
    ಆರಂಭ: ಬೆಳಗ್ಗೆ 6
    ಇಂಗ್ಲೆಂಡ್-ಅಮೆರಿಕ
    ಗ್ರೂಪ್-2
    ಆರಂಭ: ರಾತ್ರಿ 8.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್‌ಸ್ಟಾರ್ .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts