ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಭಾರತೀಯ ನೌಕಾಪಡೆ ಮುಖ್ಯಸ್ಥರನ್ನಾಗಿ ವೈಸ್​ ಅಡ್ಮಿರಲ್​ ಕರಂಬೀರ್​ ಸಿಂಗ್​ ಅವರನ್ನು ನೇಮಿಸಿದ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ಸಲ್ಲಿಸಿದ್ದ ದೂರನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ.

ಸೇವಾ ಹಿರಿತನ ಹೊಂದಿದ್ದ ಹೊರತಾಗಿಯೂ ತಮ್ಮ ಹೆಸರನ್ನು ನೌಕಾಪಡೆ ಮುಖ್ಯಸ್ಥನ ಸ್ಥಾನಕ್ಕೆ ಪರಿಗಣಿಸದಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪಿಸಿ ರಕ್ಷಣಾ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು. ಏ.10ರಂದು ಇವರು ಸಲ್ಲಿಸಿದ್ದ ದೂರನ್ನು ಸಚಿವಾಲಯ ತಿರಸ್ಕರಿಸಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ (ನೌಕಾಪಡೆ) ರಿಚಾ ಮಿಶ್ರಾ, ಸೇನಾಪಡೆಗಳ ಮುಖ್ಯಸ್ಥರ ನೇಮಕಾತಿಯಲ್ಲಿ ಸೇವಾ ಹಿರಿತನಕ್ಕೆ ಆದ್ಯತೆ ನೀಡಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಅದುವೇ ಮುಖ್ಯವಲ್ಲ. ಈ ಹಿಂದೆ ನೌಕಾಪಡೆ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯಲ್ಲಿ ಕೂಡ ಈ ಅಂಶವನ್ನು ಪರಿಗಣಸದೆ ಹೋಗಿರುವ ಹಲವು ನಿದರ್ಶನಗಳಿವೆ ಎಂದರು.