ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವೆಗೆ ಸಂಸದೆ ಶೋಭಾ ಸಾಥ್

ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಗ್ಗೆ ಆಗಮಿಸಿ ದೇವರ ದರ್ಶನ ಮಾಡಿ, ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಅಭಿನಂದನ್ ಉಡುಪಿಗೆ ಕಳುಹಿಸುವಂತೆ ಪಲಿಮಾರು ಶ್ರೀ ಕೋರಿಕೆ
ವಿಂಗ್ ಕಮಾಂಡರ್ ಅಭಿನಂದನ್ ಅವರ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಅವರಿಗೆ ಕೃಷ್ಣಮಠದಲ್ಲಿ ಗೌರವಾರ್ಪಣೆ ಮಾಡಲು ಉದ್ದೇಶಿಸಲಾಗಿದೆ. ಉಡುಪಿಗೆ ಕಳುಹಿಸಿಕೊಡಿ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಲ್ಲಿ ಬೇಡಿಕೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯಿರಿ ಎಂದು ತಿಳಿಸಿದರು.

ನಿರ್ಮಲಾ ಬೇಡಿಕೆ
ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿಯಿದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ದೇಶ ಸುರಕ್ಷಿತರ ಕೈಯ್ಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ ಆಶೀರ್ವದಿಸಬೇಕು ಎಂದು ವಿನಂತಿಸಿದರು.

ಬ್ರಹ್ಮಕಲಶೋತ್ಸವಕ್ಕೆ ಬರ್ತೇನೆ
ಉಡುಪಿ ಜತೆ ನನಗೆ ಒಂದನೇ ವರ್ಷದಿಂದ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ. ಜೂ.6ಕ್ಕೆ ನಡೆಯುವ ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ನಾಮಪತ್ರ ಸಲ್ಲಿಸಲಿದ್ದು, ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಉಡುಪಿಗೆ ಭೇಟಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ರಕ್ಷಣಾ ಸಚಿವರ ಕೃಷ್ಣಮಠ ಭೇಟಿ ವೇಳೆ ಶಾಸಕ ರಘುಪತಿ ಭಟ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬಿ.ಜೆ.ಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಶ್ರೀಶ ನಾಯಕ್,ಪ್ರದೀಪ್ ರಾವ್,ವಿಜಯ್ ಭಟ್,ಭಾರತಿಶೆಟ್ಟಿ, ಸುವರ್ಧನ್ ನಾಯಕ್, ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *