26ರಂದು ನಿರ್ಮಲಾ ಸೀತಾರಾಮನ್ ಉಡುಪಿಗೆ

ಉಡುಪಿ: 26ರಂದು ಬೆಳಗ್ಗೆ 10ಗಂಟೆಗೆ ನಗರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 25ರಂದು ನಿರ್ಮಲಾ ಉಡುಪಿಗೆ ಆಗಮಿಸಲಿದ್ದು. 26ರ ಬೆಳಗ್ಗೆ 8.30ಕ್ಕೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 10ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಅವರು ನನ್ನೊಂದಿಗೆ ಭಾಗವಹಿಸಲಿದ್ದಾರೆ. ಸಾಯಂಕಾಲ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಯಲಿದೆ ಎಂದು ಶೋಭಾ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಗೀತಾಂಜಲಿ ಸುವರ್ಣ, ಸಾಣೂರು ನರಸಿಂಹ ಕಾಮತ್, ಪ್ರಭಾಕರ ಪೂಜಾರಿ, ಕುಯ್ಲಡಿ ಸುರೇಶ್ ನಾಯಕ್ ಗೋಷ್ಠಿಯಲ್ಲಿದ್ದರು.

ಶುಭದಿನದಂದು ಶೋಭಾ ಸಾಂಕೇತಿಕ ನಾಮಪತ್ರ: ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಶುಕ್ರವಾರ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಶುಕ್ರವಾರ ದೇವಿಯ ಆರಾಧನೆ ದಿನವಾಗಿದ್ದು, ಶುಭದಿನ, ಮುಹೂರ್ತ ನೋಡಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಶೋಭಾ ಕರಂದ್ಲಾಜೆ ಸುದ್ದಿಗಾರರಿಗೆ ತಿಳಿಸಿದರು. ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆರಂಭವಾದಾಗಿಂದಲೂ ಒಂದಲ್ಲ ಒಂದು ವಿಷಯಕ್ಕೆ ಕಿತ್ತಾಡಿಕೊಳ್ಳುತ್ತಾ ಬಂದಿದೆ. ಲೋಕಸಭಾ ಸೀಟು ಹಂಚಿಕೆ ವಿಚಾರದಲ್ಲೂ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿಯೂ ಮಹಾಘಟ್‌ಬಂಧನ್ ವಿಫಲವಾಗಿದೆ.
|ಶೋಭಾ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿ