ಶಿವಮೊಗ್ಗ: ಸುಗಮ ಆಡಳಿತದ ಹಿತದೃಷ್ಟಿಯಿಂದ ನಗರಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳನ್ನು 3 ವಲಯಗಳನ್ನಾಗಿ ವಿಭಜಿಸಿರುವುದರಲ್ಲಿ ಬಹಳಷ್ಟು ನ್ಯೂನತೆಗಳಿವೆ. ಇದನ್ನು ಮರು ಪರಿಶೀಲಿಸಿ ಎಲ್ಲಾ ವಾರ್ಡ್‌ಗಳ ಜನರಿಗೂ ಅನುಕೂಲವಾಗುವಂತೆ ವಲಯಗಳನ್ನು ಗುರುತಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕೋರ್ ಕಮಿಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್, ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ಜೆಡಿಎಸ್ ಪ್ರಮುಖರು ಬುಧವಾರ ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ವಲಯ ಕಚೇರಿಗಳಿಗೆ ಅವೈಜ್ಞಾನಿಕವಾಗಿ ಜಾಗಗಳನ್ನು ಗುರುತಿಸಲಾಗಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗುವ ಬದಲಿಗೆ ಅನಾನುಕೂಲಗಳೇ ಹೆಚ್ಚು. ವಲಯ 1ರ ಕಚೇರಿ ವಿನೋಬನಗರ ಪೊಲೀಸ್ ಚೌಕಿ ಬಳಿಯಿದೆ. ಇದಕ್ಕೆ ಟಿಪ್ಪು ನಗರ, ಸವಾಯಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಸೇರಿಸಲಾಗಿದೆ. ಈ ಪ್ರದೇಶಗಳು ಐದಾರು ಕಿ.ಮೀ ದೂರದಲ್ಲಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಲಯ 3ರ ವ್ಯಾಪ್ತಿಗೆ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ವಾರ್ಡ್ ಸೇರಿಸಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತದೆ. ಅಧಿಕಾರ ವಿಕೇಂದ್ರೀಕರಣದಿಂದ ಅನುಕೂಲವಾಗಬೇಕು. ಆದರೆ ಈಗ ವಲಯ ರೂಪಿಸಿರುವುದು ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.
ಜಿಲ್ಲಾ ಜೆಡಿಎಸ್ ಮುಖಂಡರಾದ ಉಮಾಶಂಕರ ಉಪಾಧ್ಯ, ಕೃಷ್ಣ, ವೆಂಕಟೇಶ್, ವಿಜಯಕುಮಾರ್, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ದಯಾನಂದ್, ಮಾಧವಮೂರ್ತಿ, ಸಿದ್ದೇಶ್, ಗೋವಿಂದರಾಜ್, ಗೋಪಿ ಮೊದಲಿಯರ್, ಪುಷ್ಪಾ, ಲಕ್ಷೀ, ಸರಿತಾ ಇತರರಿದ್ದರು.