ಹಿರೀಕ್ಯಾತನಹಳ್ಳಿ ಗ್ರಾಪಂನಲ್ಲಿ ಮುಖಭಂಗ, ಮುಳ್ಳೂರಿನಲ್ಲಿ ಸಂಭ್ರಮ
ಹುಣಸೂರು : ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಎರಡು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಸಭೆಯಲ್ಲಿ ಒಬ್ಬರು ಅಧ್ಯಕ್ಷಗಾದಿ ಕಳೆದುಕೊಂಡರೆ ಮತ್ತೊಬ್ಬರು ಪದವಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷಗಾದಿ ಕಳಕೊಂಡರೆ, ಮುಳ್ಳೂರು ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಬಾಯಿ ಅಧ್ಯಕ್ಷಸ್ಥಾನ ಉಳಿಸಿಕೊಂಡರು.
ಒಟ್ಟು 16 ಸದಸ್ಯರ ಬಲ ಹೊಂದಿರುವ ಹಿರೀಕ್ಯಾತನಹಳ್ಳಿ ಗ್ರಾ.ಪಂ.ನಲ್ಲಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡಿಲಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅವಿಶ್ವಾಸ ನಿರ್ಣಯ ಸಭೆಯಲ್ಲಿ 12 ಸದಸ್ಯರು ಅವಿಶ್ವಾಸ ನಿರ್ಣಯದ ಪರ ಕೈ ಎತ್ತುವ ಮೂಲಕ ಅಧ್ಯಕ್ಷೆ ರುಕ್ಮಿಣಿ ಅವರನ್ನು ಪದವಿಯಿಂದ ಕೆಳಗಿಳಿಸಿದರು.
ಗೆದ್ದು ಬೀಗಿದ ಅನಸೂಯಾ: ಮುಳ್ಳೂರು ಗ್ರಾ.ಪಂ. ಸದಸ್ಯಬಲ 17 ಆಗಿದ್ದು, ಅವಿಶ್ವಾಸ ನಿರ್ಣಯದ ಪರ ಗೆಲುವು ಸಾಧಿಸಲು 12 ಸದಸ್ಯರ ಬೆಂಬಲ ಬೇಕಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಅವಿಶ್ವಾಸ ನಿರ್ಣಯ ಸಭೆಯಲ್ಲಿ 11 ಜನ ಸಭೆ ಹಾಜರಾಗುವ ಮೂಲಕ ನಿಗದಿತ ಕೋರಂ ಕೊರತೆ ಉಂಟಾದ ಕಾರಣ ಚುನಾವಣಾಧಿಕಾರಿ ಸಭೆಯನ್ನು ರದ್ದುಗೊಳಿಸಿದರು. ಆ ಮೂಲಕ ಅನಸೂಯಾಬಾಯಿ ಸ್ಥಾನ ಉಳಿಸಿಕೊಳ್ಳುವ ಮೂಲಕ ಗೆದ್ದುಬೀಗಿದರು.