More

    ಬಿಜೆಪಿ ಪಕ್ಷದೊಳಗಿನವರ ಷಡ್ಯಂತ್ರದಿಂದ ಸೋಲು

    ಹಾವೇರಿ: ಬಿಜೆಪಿ ಕಾರ್ಯಕರ್ತರು ಯಾವುದೇ ಪರಿಸ್ಥಿತಿಗಳಲ್ಲಿ ಗೊಂದಲಕ್ಕೆ ಒಳಗಾಗುವುದು ಬೇಡ. ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ನಿಮ್ಮೆಲ್ಲರ ಶ್ರಮದಿಂದಾಗಿ 82,000 ಮತಗಳನ್ನು ಪಡೆಯುವಲ್ಲಿ ನಾನು ಯಶಸ್ವಿಯಾಗಿದ್ದೇನೆ.

    ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ನಮ್ಮವರೇ ಕೆಲವರು ನಮ್ಮ ವಿರುದ್ಧ ಷಡ್ಯಂತ್ರ ಹೆಣೆದಿದ್ದಕ್ಕಾಗಿ ಸೋಲು ಅನುಭವಿಸುವಂತಾಯಿತು ಎಂದು ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸಿದರು.
    ನಗರದ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸೋಲಿನಿಂದ ಕುಗ್ಗದೆ ಮುಂದಿನ ಗೆಲುವುಗಳಿಗಾಗಿ ಹಿಗ್ಗಿನಿಂದ ಕೆಲಸ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಸೇವೆಯ ಮಾರ್ಗದಲ್ಲಿ ನಾವೆಲ್ಲ ಸಾಗೋಣ. ನಾನು ಇದ್ದ ಸರ್ಕಾರಿ ನೌಕರಿ ಬಿಟ್ಟು ಹಣ ಮಾಡಲು, ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸೇವೆ ಎಂಬ ಪದಕ್ಕೆ ನಿಜವಾದ ಅರ್ಥ ತುಂಬಿ ಕೊಡುವ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ.

    ನನ್ನ ಮೇಲೆ ಭರವಸೆ ಇಟ್ಟು 82,000 ಮತಗಳನ್ನು ನೀಡಿದ್ದಕ್ಕೆ ನಿಮಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯ ಹೊತ್ತಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳಾಗುವ ರೀತಿಯಲ್ಲಿ ನಿಮ್ಮ ಸಹಕಾರದಿಂದ ಬಯಸುತ್ತೇನೆ ಎಂದು ಹೇಳಿದರು.

    ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಹಾವೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಸೋಲು ಸೋಲಲ್ಲ. ಅದೊಂದು ಕಾರ್ಯಕರ್ತರ ಗೆಲುವು. ಇದನ್ನೇ ಮೆಟ್ಟಿಲಾಗಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.

    ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ ಮಾತನಾಡಿ, ಸಮಯದ ಅಭಾವದಿಂದ ಪೂರ್ಣ ಪ್ರಮಾಣದಲ್ಲಿ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸೋಣ ಎಂದರು.
    ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯಮ್ಮ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಹಾವೇರಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪತ್ತಾರ, ಬಸವರಾಜ ಕೋಳಿವಾಡ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನೀಲಪ್ಪ ಚಾವಡಿ, ಜಿಲ್ಲಾ ಎಸ್ ಟಿ ಮೋರ್ಚಾ ಕಾರ್ಯದರ್ಶಿ ದ್ಯಾಮಣ್ಣ ಕೊಟ್ಟೂರ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಲಗೂರ, ಕಾರ್ಯದರ್ಶಿ ಗುಡ್ಡಪ್ಪ ಭರಡಿ, ಫಕೀರೇಶ ಹಾವನೂರ, ಮಾರುತಿ ಗೊರವರ, ಮೃತ್ಯುಂಜಯ ಎಲಿಗಾರ, ವಿರೂಪಾಕ್ಷಪ್ಪ ಹುಲ್ಲೂರ, ನಾಗಪ್ಪ ಕೋಣನವರ, ಮಧುಕೇಶ್ವರ ಹಂದ್ರಾಳ, ನಂಜುಂಡೇಶ್ವರ ಕಲ್ಲೇರ, ರಾಜಶೇಖರ ಕಾತರಕಿ, ಬಸವರಾಜ ದೊಂಕಣ್ಣವರ, ನಿಂಗಪ್ಪ ಹಾವೇರಿ, ಚೇತನ ಅಂದಪ್ಪನವರ, ದಶರಥ ದಳವಾಯಿ, ವಿಜಯಕುಮಾರ ಚಿನ್ನಿಕಟ್ಟಿ, ಮಹಂತೇಶಗೌಡ ಹತ್ತಿಮತ್ತೂರ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

    ಗೌಜು, ಗದ್ದಲ

    ಪಕ್ಷದ ಒಳಗೆ ಇದ್ದುಕೊಂಡೇ ಪಕ್ಷದ ವಿರುದ್ಧ ನಡೆದುಕೊಂಡ ಕೆಲವರನ್ನು ಅಮಾನತು ಮಾಡುವಂತೆ ಕೆಲ ಕಾರ್ಯಕರ್ತರು ಸಭೆಯಲ್ಲಿ ಆಗ್ರಹಿಸಿದರು. ಇದರಿಂದ ಕೆಲಕಾಲ ಗೌಜು, ಗದ್ದಲ ಉಂಟಾಗಿತ್ತು. ಸೋಲಿಗೆ ಕಾರಣರಾದವರ ವಿರುದ್ಧ ಕೆಲವರು ಆಕ್ರೋಶ ಹೊರಹಾಕಿದರು. ಕೆಲ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts