ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ

ಜೋಧ್​ಪುರ: ಟ್ವಿಟರ್ ಸಿಇಒ ಜಾಕ್ ಡಾರ್ಸಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಜೋಧ್​ಪುರ ಅಧೀನ ನ್ಯಾಯಾಲಯ ಆದೇಶಿಸಿದೆ. ಬ್ರಾಹ್ಮಣಿಕೆಯ ಯಜಮಾನಿಕೆ ಅಂತ್ಯಗೊಳಿಸಿ ಎಂಬ ಪೋಸ್ಟರ್ ಹಿಡಿದ ಚಿತ್ರವೊಂದು ಟ್ವಿಟರ್​ನಲ್ಲಿ ಇತ್ತೀಚಿಗೆ ವೈರಲ್ ಆಗಿತ್ತು. ಇದರ ವಿರುದ್ಧ ಕೋರ್ಟ್​ಗೆ ವಿಪ್ರ ಪ್ರತಿಷ್ಠಾನ ಅರ್ಜಿ ಸಲ್ಲಿಸಿದ್ದು, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿಕೊಳ್ಳಲು ಮನವಿ ಮಾಡಿದೆ. ಅರ್ಜಿ ಪುರಸ್ಕರಿಸಿರುವ ನ್ಯಾಯಾಧೀಶರು, ಜ್ಯಾಕ್ ವಿರುದ್ಧ ಎಫ್​ಐಆರ್​ಗೆ ಸೂಚಿಸಿದ್ದಾರೆ. ಜ್ಯಾಕ್ ಅವರ ಈ ನಡವಳಿಕೆಯಿಂದ ಧರ್ಮ ಹಾಗೂ ಸಮುದಾಯದ ಭಾವನೆಗಳಿಗೆ ಘಾಸಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವ ಪೋಸ್ಟ್ ಮಾಡಲಾಗಿದೆ. ಇದರಿಂದ ವಿಪ್ರ ಸಮಾಜದ ಮಾನನಷ್ಟವಾಗಿದೆ ಎಂದು ಅರ್ಜಿಯಲ್ಲಿ ದಾಖಲಿಸಲಾಗಿದೆ.