ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿ ರೈಸ್ ಪುಲ್ಲಿಂಗ್ ಹಾಗೂ ಕಾಡು ಪ್ರಾಣಿಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಎಸ್.ಮಹೇಶ್ ತಿಳಿಸಿದರು.

ಬಿಳಿಗಿರಿರಂನಬೆಟ್ಟದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ರೈಸ್‌ಪುಲ್ಲಿಂಗ್ ಹಾಗು ಕಾಡು ಪ್ರಾಣಿಗಳ ಬೇಟೆಗಾರರಿಗೆ ತನ್ನ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಅವರನ್ನು ವಜಾಗೊಳಿಸಬೇಕು ಎಂದು ಸಾರ್ವಜನಿಕರು ದೂರಿನ ಹಿನ್ನೆಲೆ ಮಾತನಾಡಿದರು.
ಈಗಾಗಲೇ ಮೊಲ, ಗೌಜಲಕ್ಕಿಗಳನ್ನು ಕೊಂದಿರುವ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈಸ್‌ಪುಲ್ಲಿಂಗ್ ಪಾತ್ರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ಅದನ್ನು ಶೀಘ್ರದಲ್ಲೇ ತಹಸೀಲ್ದಾರ್‌ಗೆ ಹಸ್ತಾಂತರಿಸಲಾಗುವುದು ಎಂದು ಆರ್‌ಎಫ್‌ಒ ಮಹಾದೇವಯ್ಯ ಮಾಹಿತಿ ನೀಡಿದರು.

ಕಲ್ಯಾಣಿ ಪೋಡಿನ ಸಮಸ್ಯೆ ಬಗೆಹರಿಸಲು ಕ್ರಮ: ಬೆಟ್ಟದಲ್ಲಿರುವ ಕಲ್ಯಾಣಿ ಪೋಡಿನ ಖಾಸಗಿ ವ್ಯಕ್ತಿಯೊಬ್ಬರು ಇದು ನನ್ನ ಜಮೀನು ಎಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ಹಲವು ತಲೆಮಾರುಗಳಿಂದಲೂ ಇಲ್ಲಿ ಸೋಲಿಗರು ವಾಸ ಮಾಡುತ್ತಿದ್ದಾರೆ. ಈ ಖಾಸಗಿ ವ್ಯಕ್ತಿಗಳು ಇಲ್ಲಿ ರಸ್ತೆ, ವಿದ್ಯುತ್ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡುತ್ತಿದ್ದಾರೆ. ಎಲ್ಲ ಕಾಮಗಾರಿಗಳು ಅರ್ಧಂಬರ್ಧವಾಗಿದ್ದು, ಇದನ್ನು ಪೂರ್ಣಗೊಳಿಸಲು ನೆರವಾಗಬೇಕು ಎಂದು ಇಲ್ಲಿನ ನಾಗರಿಕರು ಅರ್ಜಿ ಸಲ್ಲಿಸಿದರು.
ಈ ಬಗ್ಗೆ ಸಂಬಂಧಪಟ್ಟ ಸೆಸ್ಕ್, ಪಂಚಾಯತ್ ರಾಜ್ ಇಲಾಖೆಯವರು ಕ್ರಮ ವಹಿಸಿ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ತಾಕೀತು ಮಾಡಿದರು.

ಕಂದಾಯ ಇಲಾಖೆ ಆಸ್ತಿ ಬಗ್ಗೆ ಕ್ರಮ: ಬೆಟ್ಟದಲ್ಲಿ 630 ಎಕರೆ ಜಮೀನು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯದ ವಕೀಲ ರಮೇಶ್ ಬಳಿ ಸಾಕಷ್ಟು ದಾಖಲೆಗಳಿವೆ. ಆದರೆ ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ ಕೇವಲ 130 ಎಕರೆ ಭೂಮಿ ಮಾತ್ರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದೆ ಎಂದು ನಮೂದಾಗಿದೆ. ಈ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ಸ್ಥಳೀಯರ ನೆರವಿನೊಂದಿಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಇದಾದ ಬಳಿಕ ಇಲ್ಲಿನ ಹಲವು ಭೂ ಸಂಬಂಧಿತ ವ್ಯಾಜ್ಯಗಳು ಬಗೆಹರಿಯಲಿವೆ. ಇಲ್ಲಿ ಪೌತಿ ಖಾತೆ ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.

ದೇಗುಲದ ಆದಾಯ ಸ್ಥಳೀಯ ಆಡಳಿತಕ್ಕೂ ಸಿಗಲಿ: ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಗೆ ಆದಾಯದ ಕೊರತೆ ಇದೆ. ಇಲ್ಲಿ ಬಿಳಿಗಿರಿರಂಗನಾಥಸ್ವಾಮಿ ದೇಗುಲವಿದ್ದರೂ ಆದಾಯವೆಲ್ಲಾ ದೇವಸ್ಥಾನಕ್ಕೆ ಸೇರುತ್ತದೆ. ಆದರೆ ಸ್ವಚ್ಚತೆ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಪಂಚಾಯಿತಿಯೇ ಒದಗಿಸಬೇಕು. ಹಾಗಾಗಿ ಸುಂಕ ವಸೂಲಿ, ಇತರೆ ಮೂಲಗಳಿಂದ ಬರುವ ಆದಾಯದಲ್ಲಿ ಶೇ.50ರಷ್ಟನ್ನು ಗ್ರಾಮ ಪಂಚಾಯಿತಿಗೆ ಸಿಗುವಂತಾಗಬೇಕು ಎಂದು ತಾಪಂ ಇಒ ಬಿ.ಎಸ್.ರಾಜು ಮನವಿ ಮಾಡಿದರು. ಈ ಬಗ್ಗೆ ಯೋಚಿಸಿ ತೀರ್ಮಾನಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಜತೆಗೆ ಬೆಟ್ಟದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಬಿಳಿಗಿರಿ ಭವನದ ಅಭಿವೃದ್ಧಿ, ಶೌಚಗೃಹ ನಿರ್ಮಾಣ, ದೇಗುಲದ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಂದಾಯ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆ ಫಲಾನುಭವಿಗಳಿಗೆ ಸ್ಥಳದಲ್ಲೇ ಆದೇಶ ಪತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ಇಲಾಖೆ ಅಧಿಕಾರಿಗಳು ತಮ್ಮಲ್ಲಿರುವ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಸರೋಜಮ್ಮ, ಕೃಷ್ಣವೇಣಿ, ರಾಮ, ಬಸವೇಗೌಡ, ಲಕ್ಷ್ಮಿ, ತಹಸೀಲ್ದಾರ್ ವರ್ಷಾ, ಉಪ ತಹಸೀಲ್ದಾರ್ ನಂಜುಂಡಯ್ಯ, ಪಿಡಿಒ ಬಿ.ಸ್ವಾಮಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *