ಈ ರೈತರ ಬೆಳೆಗಳ ರಕ್ಷಣೆಗೆ ಬಿಯರ್​ ಬಾಟಲಿಗಳೇ ಆಪ್ತರಕ್ಷಕ!

ಗದಗ: ಪ್ರಾಕೃತಿಕ ವಿಕೋಪಗಳನ್ನು ಹೊರತುಪಡಿಸಿ ಪ್ರಾಣಿಗಳು ಅಥವಾ ಇತರೇ ಕಾರಣಗಳಿಂದಾಗಿ ತಾವು ಬೆಳೆದ ಬೆಳೆ ರಕ್ಷಣೆಗಾಗಿ ರೈತರು ಹಲವಾರು ಕ್ರಮಗಳಿಗೆ ಈಗಾಗಲೇ ಮುಂದಾಗಿದ್ದಾರೆ. ಆದರೆ, ಇಲ್ಲೊಂದು ಹೊಸ ಕ್ರಮ ಇದೀಗ ಅಚ್ಚರಿಗೆ ಕಾರಣವಾಗಿದೆ.

ಅದೇನು ಅಂತೀರಾ? ಬೆಳೆ ರಕ್ಷಣೆಗೆ ರೈತರು ಬಿಯರ್ ಬಾಟಲ್​ಗಳ ಮೊರೆ ಹೋಗಿದ್ದಾರೆ. ಜಿಂಕೆ ಹಾವಳಿ ತಪ್ಪಿಸುವುದಕ್ಕೆ ಬಿಯರ್ ಬಾಟಲ್‌ಗಳನ್ನು ಆಶ್ರಯಿಸಿರುವ ರೈತರು ಹೊಲಗದ್ದೆಗಳಲ್ಲಿ ಬಿಯರ್ ಬಾಟಲ್​ಗಳನ್ನು ತೂಗಿ ಹಾಕಿ ವನ್ಯ ಪ್ರಾಣಿಗಳಿಂದ ಬೆಳೆಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ, ನರೇಗಲ್ ಭಾಗದಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದ್ದು, ಹೊಲಗದ್ದೆಗಳಲ್ಲಿ ಕಂಬ ಹಾಗೂ ಗಿಡ ಮರಗಳಿಗೆ ಬಿಯರ್ ಬಾಟಲಿಗಳನ್ನು ರೈತರು ಕಟ್ಟುತ್ತಿದ್ದಾರೆ. ಬಿಯರ್ ಬಾಟಲಿಗಳ ಟಿಣ್​ ಟಿಣ್​ ಶಬ್ದಕ್ಕೆ ಹೆದರಿ ಜಿಂಕೆಗಳು ಹೊಲಗದ್ದೆಗಳ ಹತ್ತಿರಕ್ಕೆ ಬರುತ್ತಿಲ್ಲ.