ಶೃಂಗೇರಿಯಲ್ಲಿ ಲಕ್ಷ ದಿಪೋತ್ಸವ ಸಂಭ್ರಮ

ಶೃಂಗೇರಿ: ಶ್ರೀಮಠದ ಆವರಣದ ದೇವಾಲಯಗಳ ಸುತ್ತಮುತ್ತ ಪ್ರಜ್ವಲಿಸಿದ ಹಣತೆ, ಪುಟಾಣಿಗಳ ಕಣ್ಣುಗಳಲ್ಲಿ ದೀಪಹಚ್ಚಿದ ಸಂಭ್ರಮ, ಮುತೆôದೆಯರಲ್ಲಿ ತುಂಗಾನದಿಗೆ ಬಾಗಿನ ಸಮರ್ಪಿಸಿದ ಧನ್ಯತಾಭಾವ ರಾಜಬೀದಿ ಇಕ್ಕೆಲೆಗಳಲ್ಲಿ ಪುಟ್ಟ ಹಣತೆಗಳಲ್ಲಿ ಮಿನುಗಿದ ಚಿನ್ನದ ಬೆಳಕು. ಶುಕ್ರವಾರ ಶ್ರೀಮಠದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರ ಶ್ರದ್ಧಾಭಕ್ತಿ ಭಾವಕ್ಕೆ ಸಾಕ್ಷಿಯಾಯಿತು.

ಶ್ರೀಮಠದ ಜಗದ್ಗುರು ಶ್ರೀ ಭಾರತೀತೀರ್ಥರು ರಾತ್ರಿ 8.30ಕ್ಕೆ ಬೆಟ್ಟಕ್ಕೆ ಆಗಮಿಸಿ ಶ್ರೀ ಸ್ತಂಭಗಣಪತಿ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ಭವಾನಿ ಅಮ್ಮನವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾ ಮಂಗಳಾರತಿ, ಅಷ್ಟವಧಾನ ಸೇವೆ ನೆರವೇರಿಸಿ ಪರಕಾಳಿಯನ್ನು ದಹಿಸಲಾಯಿತು.

ಜಗದ್ಗುರು ಶ್ರೀಭಾರತೀ ತೀರ್ಥರು ಪ್ರಥಮ ದೀಪ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಭವಾನಿ ಮಲಹಾನಿಕರೇಶ್ವರ ಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತರುವ ಸಂದರ್ಭದಲ್ಲಿ ಶ್ರೀಮಠದ ಒಳ ಹಾಗೂ ಹೊರಪ್ರಾಂಗಣದಲ್ಲಿರುವ ದೇವಾಲಯಗಳ ಸುತ್ತಮುತ್ತ ದೀಪಗಳ ಬೆಳಕು ಹಾಗೂ ಶೃಂಗೇರಿಯ ರಾಜಬೀದಿ ಹಾಗೂ ಮಲಹಾನಿಕರೇಶ್ವರ ಬೆಟ್ಟದಿಂದ ಶ್ರೀಮಠದ ತನಕ ಸಹಸ್ರಾರು ದೀಪಗಳು ಬೆಳಗಿದವು.

ಶ್ರೀಮಠದ ಆವರಣದಲ್ಲಿರುವ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿನ ವಿದ್ವಾನ್.ಬಿ.ಕೆ.ಶ್ಯಾಮಪ್ರಕಾಶ್ ಶಿಷ್ಯರಿಂದ ‘ಶಂಕರ ಚರಿತ್ರಾಮೃತ’ ನೃತ್ಯರೂಪಕ ಜರುಗಿತು. ನಂತರ ಜೇಸಿಸ್ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನೆರವೇರಿತು.

ಶಾರದಾ ದೇಗುಲದಲ್ಲಿ ವಿಶೇಷ ಪೂಜೆ: ದೀಪೋತ್ಸವ ಸಲುವಾಗಿ ಮಠದಲ್ಲಿ ಶ್ರೀ ಶಾರದಾಂಬಾ ಬಂಗಾರದ ರಥೋತ್ಸವ, ಮಹಾ ಮಂಗಳಾರತಿ, ಅಷ್ಟವಧಾನ ಸೇವೆ ನಡೆಯಿತು. ನಂತರ ಶ್ರೀ ಶಾರದಾಂಬೆ, ಶ್ರೀ ಭವಾನಿಯಮ್ಮ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ವಿದ್ಯಾಶಂಕರ, ಶ್ರೀ ಶಂಕರಾಚಾರ್ಯರು ಪಂಚ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ತುಂಗಾನದಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀಮಠದ ಪುರೋಹಿತರು ಧಾರ್ವಿುಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಋತ್ವಿಜರು ತುಂಗೆಗೆ ಆರತಿ ಬೆಳಗಿದರು. ಮುತೆôದೆಯರು ಸಹಸ್ರ ದೀಪಗಳ ಬಾಗಿನ ಸಮರ್ಪಿಸಿದರು. ಸಾವಿರಾರು ಭಕ್ತರು ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪರಕಾಳಿ ದಹನ: ತೈಲದಲ್ಲಿ ನೆನೆಸಿಟ್ಟ ನೀಳವಸ್ತವನ್ನು ಎತ್ತರದಿಂದ ಕೋಲುಗಳ ನಡುವೆ ಇಳಿಬಿಟ್ಟು ಮೇಲ್ಭಾಗದಲ್ಲಿ ದೀವಟಿಗೆಯಿಂದ ಅಲಂಕರಿಸಿ ಕೆಳಗಿನಿಂದ ಅದನ್ನು ಪ್ರಜ್ವಲಿಸಲಾಗುತ್ತದೆ. ಇದನ್ನು ಪರಕಾಳಿ ದಹನ ಎನ್ನಲಾಗುತ್ತದೆ. ಜ್ವಾಲಾತೋರಣ ಎಂಬ ಮತ್ತೊಂದು ಹೆಸರು ಇದೆ. ಶ್ರೀ ಮಲಹಾನಿಕರೇಶ್ವರ ಬೆಟ್ಟದ ಧ್ವಜಸ್ತಂಭದ ಮುಂಭಾಗದಲ್ಲಿ ಪರಕಾಳಿ ದಹಿಸಲಾಗುತ್ತದೆ. ಜ್ವಾಲೆ ಕಪ್ಪುಮಸಿಯನ್ನು ರಕ್ಷೆಗೆಂದು ಭಕ್ತರು ಶ್ರದ್ಧಾಭಕ್ತಿಯಿಂದ ಪಡೆದುಕೊಳ್ಳುತ್ತಾರೆ.