More

    ಜೆಎನ್​ಯು ಪ್ರತಿಭಟನೆಗೆ ಬೆಂಬಲ ಬೆನ್ನಲ್ಲೇ ದೀಪಿಕಾಗೆ ತೀವ್ರ ವಿರೋಧ: ಟ್ರೆಂಡ್​ ಆಯ್ತು #shameonbollywood ಹ್ಯಾಶ್​ಟ್ಯಾಗ್​!

    ನವದೆಹಲಿ: ಮಂಗಳವಾರ ರಾತ್ರಿ ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್​ ನೀಡಿದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

    ನಿನ್ನೆ ರಾತ್ರಿ 7.30ಕ್ಕೆ ವಿವಿ ಆವರಣಕ್ಕೆ ಬಂದ ದೀಪಿಕಾ, ವಿದ್ಯಾರ್ಥಿಗಳ ಪ್ರತಿಭಟನಾ ಸಭೆಯಲ್ಲಿ 15 ನಿಮಿಷಗಳ ಕಾಲ ಭಾಗವಹಿಸಿದ್ದರು. ಅಲ್ಲದೆ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಮತ್ತು ಹಳೆಯ ಮುಖಂಡ ಕನ್ಹಯ್ಯ ಕುಮಾರ್​ ಅವರ ಜತೆಯು ನಿಂತಿದ್ದರು. ಬಳಿಕ ಕೆಲ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಲ್ಲಿಂದ ತೆರಳಿದರು.

    ದೀಪಿಕಾ ಅವರ ಈ ನಡೆಗೆ ತೀವ್ರ ಕಿಡಿಕಾರಿರುವ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #shameonbollywood ಹ್ಯಾಶ್​ಟ್ಯಾಗ್​ ಮೂಲಕ ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲ ನೀಡಿದ ಸೆಲೆಬ್ರಿಟಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ದೀಪಿಕಾ ಮೇಲೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದ್ದು, ಅವರ ಮುಂದಿನ ಚಪಾಕ್​ ಚಿತ್ರವನ್ನು ಬಹಿಷ್ಕರಿಸಿ ಎಂದು #boycottchhapaak ಹ್ಯಾಶ್​ಟ್ಯಾಗ್​ ಮೂಲಕ ಟ್ವಿಟರ್​ ಅಭಿಯಾನ ಶುರು ಮಾಡಿದ್ದಾರೆ.

    ಇಷ್ಟಕ್ಕೆ ನಿಲ್ಲದೇ ಅನೇಕರು ತಮ್ಮದೇ ರೀತಿಯಲ್ಲಿ ದೀಪಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೆಎನ್​ಯು ಆವರಣದಲ್ಲಿದ್ದ ಸ್ವಾಮಿ ವಿವೇಕಾನಂದರ ಪ್ರತಿಮೆ ಹಾನಿಗೊಳಿಸಿದಾಗ ಇವರು ಬರಲಿಲ್ಲ. ಪದ್ಮಾವತ್​ ಚಿತ್ರದ ವಿರುದ್ಧ ಪ್ರತಿಭಟಿಸುವಾಗ ಪ್ರತಿಭಟನಾಕಾರರ ಮಾತನ್ನು ಕೇಳಲಿಲ್ಲ. ಆದರೆ, ಈಗ ನೋಡಿ ಎಷ್ಟು ಪಕ್ಷಪಾತಿಯಾಗಿದ್ದಾರೆ ಎಂದು ನೆಟ್ಟಿಗರೊಬ್ಬರು ಚಪಾಕ್​ ಬಹಿಷ್ಕರಿಸಿ ಎಂದು ಪೋಸ್ಟರ್​ ಹಾಕಿಕೊಂಡು ಟೀಕಿಸಿದ್ದಾರೆ.

    ಇಂಡಿಯನ್​ ಐಡಲ್​ ಮತ್ತು ಕಪಿಲ್​ ಶರ್ಮ ಶೋನಲ್ಲಿ ಸಿನಿಮಾ ಪ್ರಚಾರ ಮಾಡಿದ್ದು ಸಾಕಾಗಲಿಲ್ಲ. ಇದೀಗ ಜೆಎನ್​ಯು ತುಕಡೆ ತುಕಡೆ ಗ್ಯಾಂಗ್​ನಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ನನ್ನ ದೇಶಕ್ಕಿಂತ ಯಾರೊಬ್ಬರು ಶ್ರೇಷ್ಠರಲ್ಲ ಎಂದು ಮತ್ತೊರ್ವ ನೆಟ್ಟಿಗ ಕಿಡಿಕಾರಿದ್ದಾರೆ.

    ಇನ್ನೊರ್ವ ಜೆಎನ್​ಯು ಗೂಂಡಾಗಳ ಜತೆ ದೀಪಿಕಾ ಪಡುಕೋಣೆ ಕೈಜೋಡಿಸಿದ್ದಾರೆ. ಬಾಲಿವುಡ್​, ಜೆಎನ್​ಯು ತುಕಡೆ ತುಕಡೆ ಗ್ಯಾಂಗ್​ಗೆ ಮುಕ್ತವಾಗಿ ಬೆಂಬಲ ನೀಡಿದರೆ, ನಮ್ಮ ದೇಶಪ್ರೇಮವನ್ನು ತೋರಿಸಲು ಹಾಗೂ ಅವರನ್ನು ಬಹಿಷ್ಕರಿಸುವ ಸಮಯವಲ್ಲವೇ? ಇದು ಎಂದಿದ್ದಾರೆ. ಮತ್ತೋರ್ವ ಭಾರತವನ್ನು ಒಡೆಯಲು ಮುಂದಾಗಿರುವ ಎಡಪಂಥೀಯ ಜೆಎನ್​ಯು ಅನ್ನು ದೀಪಿಕಾ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಜರಿದಿದ್ದಾರೆ.

    ಮತ್ತೊಂದೆಡೆ ದೀಪಿಕಾಗೆ ಬೆಂಬಲ
    ಒಂದೆಡೆ ವಿರೋಧ ವ್ಯಕ್ತವಾಗುತ್ತಿದ್ದರೂ ಮತ್ತೊಂದೆಡೆ #IStandwithDeepika ಮತ್ತು #IsupportDeepika ಎಂಬ ಹ್ಯಾಶ್​ಟ್ಯಾಗ್​ ಮೂಲಕ ದೀಪಿಕಾಗೆ ಬೆನ್ನಿಗೆ ನಿಂತಿದ್ದಾರೆ. ನಿರಂಕುಶ ಪ್ರಭುತ್ವ ವಿರುದ್ಧ ಹೋರಾಡಲು ಜನರೊಂದಿಗೆ ನಿಂತ ದೀಪಿಕಾ ಅವರಿಗೆ ಧನ್ಯವಾದಗಳು. ಎಲ್ಲರೂ ಕೂಡ ಅವರ ಮುಂದಿನ ಚಿತ್ರ ಚಪಾಕ್​ಗೆ ಬೆಂಬಲ ನೀಡಿ ಎಂದು ನೆಟ್ಟಿಗರು ಕರೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts