ಸಡಗರದ ದೀಪಾವಳಿಗೆ ತಾರೆಗಳ ಸಾಥ್

ಪರಿಸರ ಜಾಗೃತಿ ಕಾರ್ಯ ಒಬ್ಬರಿಂದಾಗುವ ಕೆಲಸವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅದರ ಜವಾಬ್ದಾರಿ ಹೊರಬೇಕು. ಅದೇ ರೀತಿ ಈ ಬಾರಿಯ ದೀಪಾವಳಿಯನ್ನು ದೀಪಗಳ ಜತೆ ಆಚರಿಸಿ ಎಂದು ಕೆಲ ಸಿನಿಮಾ ತಾರೆಯರು ಕೋರಿದ್ದಾರೆ. ತಾವೂ ಮನೆಯಲ್ಲಿ ದೀಪಗಳಿಂದಲೇ ಹಬ್ಬ ಆಚರಿಸುವುದಾಗಿ ಹೇಳಿಕೊಂಡಿದ್ದಾರೆ. ಅವರವರ ಮನೆಯಲ್ಲಿನ ದೀಪಾವಳಿ ಸಂಪ್ರದಾಯ, ಸಡಗರ, ಆಚರಣೆಯ ಸಂಭ್ರಮವನ್ನು ನಮಸ್ತೆ ಬೆಂಗಳೂರು ಜತೆ ಹಂಚಿಕೊಂಡಿದ್ದಾರೆ.

 

ಹೊಸ ಬಟ್ಟೆಯಲ್ಲಿ ಮಿಂಚುವುದೇ ಸಂಭ್ರಮ

ಎಲ್ಲ ಹಬ್ಬಗಳಿಗಿಂತಲೂ ದೀಪಾವಳಿ ಎಂದರೆ, ನನಗೆ ಅಚ್ಚುಮೆಚ್ಚು. ಯಾಕೆಂದರೆ, ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸಬಹುದು. ಅಲ್ಲದೆ, ಪಟಾಕಿ ಹೊಡೆಯುವುದು ಎಂದರೆ ನನಗೆ ಎಲ್ಲಿಲ್ಲದ ಕ್ರೇಜ್. ಇದೊಂದೇ ಹಬ್ಬಕ್ಕೆ ನಾವು ಪಟಾಕಿ ಹೊಡೆಯುವುದು. ಅದಕ್ಕಾಗಿ ವರ್ಷಕ್ಕೊಮ್ಮೆ ಬರುವ ಈ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಬೇಕು. ಹಬ್ಬದ ಸಮಯದಲ್ಲಿ ನಾನು ಮನೆಯಲ್ಲಿರುತ್ತೇನೆ. ಮನೆಯಲ್ಲಿ ಮಾಡುವ ಆಚರಣೆಗಳು ಖುಷಿ ನೀಡುತ್ತವೆ. ನಾನಂತೂ ತುಂಬ ಪಟಾಕಿ ಹೊಡೆಯುತ್ತೇನೆ. ಹಾಗಂತ, ಜಾಸ್ತಿ ಸದ್ದು ಮಾಡುವ ಪಟಾಕಿ ಹೊಡೆಯೋಕೆ ನಂಗೆ ಭಯ. ಎಲ್ಲರೂ ಕೂಡ ತುಂಬ ಎಚ್ಚರಿಕೆಯಿಂದ ಪಟಾಕಿ ಹೊಡೆಯಿರಿ ಎಂಬುದು ನನ್ನ ಸಲಹೆ.

| ದಿವ್ಯಾ ಉರುಡುಗ

ಸಿನಿಮಾ ತಂಡದ ಜತೆ ಆಚರಣೆಯ ಖುಷಿ

ಬಾಲ್ಯದಲ್ಲಿ ನಾನು ಹಾಸ್ಟೆಲ್​ನಲ್ಲಿ ಓದುತ್ತಿದ್ದೆ. ಹೀಗಾಗಿ ಎರಡು ದಿನ ರಜೆ ತೆಗೆದುಕೊಂಡು ಬಂದು ಮನೆಯಲ್ಲಿ ಕುಟುಂಬದವರ ಜತೆ ದೀಪಾವಳಿ ಆಚರಿಸಿ ಮರಳುತ್ತಿದ್ದೆ. ಆಗ ಅಷ್ಟೊಂದು ಖುಷಿ ಇರುತ್ತಿರಲಿಲ್ಲ. ಇದೀಗ ಎಲ್ಲವೂ ಬದಲಾಗಿದೆ. ನಾನು ನಟಿಸಿದ ‘ಆಪಲ್​ಕೇಕ್’ ಚಿತ್ರ ಇದೇ ತಿಂಗಳಲ್ಲಿ ತೆರೆಕಾಣಲಿದೆ. ಹೀಗಾಗಿ ಕುಟುಂಬ, ಚಿತ್ರತಂಡದ ಜತೆ ಸೇರಿ ಹಬ್ಬ ಆಚರಿಸುತ್ತಿರುವುದಕ್ಕೆ ಡಬಲ್ ಖುಷಿಯಿದೆ. ಹೆಣ್ಣುಮಕ್ಕಳಿಗೆ ದೀಪಾವಳಿ ತುಂಬ ಇಷ್ಟದ ಹಬ್ಬ. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ, ಆಭರಣಗಳನ್ನು ಧರಿಸಿ ಆಚರಿಸುವುದೇ ಸಂಭ್ರಮ. ಈ ವರ್ಷದ ದೀಪಾವಳಿ ನನಗೆ ಚಿತ್ರದ ಮೂಲಕ ಬೆಳಕು ನೀಡುತ್ತದೆ ಎಂಬ ಭರವಸೆಯಲ್ಲಿದ್ದೇನೆ. ದೀಪ ಹಚ್ಚಿ ದೀಪಾವಳಿ ಸಂಭ್ರಮಿಸಿ. ಪಟಾಕಿ ಹಚ್ಚಿ ಅನಾಹುತಗಳನ್ನು ಮಾಡಿ ಕೊಳ್ಳದೆ ಜಾಗ್ರತೆಯಿಂದಿರಿ.

| ಶುಭರಕ್ಷಾ

ಒಬ್ಬಟ್ಟು ಸವಿಯುವುದೇ ನನ್ನ ಕೆಲಸ

ನಮ್ಮದು ಮೂಲ ಕೇರಳ ಆಗಿರುವುದರಿಂದ ದೀಪಾವಳಿ ಆಚರಣೆ ಕಡಿಮೆ. ಆದರೆ, ಕಳೆದ ಆರು ವರ್ಷದಿಂದ ನಾನು ಬೆಂಗಳೂರಿನಲ್ಲಿದ್ದೇನೆ. ಅಂದಿನಿಂದಲೂ ಬೆಳಕಿನ ಹಬ್ಬವನ್ನು ಆಚರಿಸುತ್ತ ಬಂದಿದ್ದೇನೆ. ಬೆಂಗಳೂರಿನಲ್ಲಿ ತುಂಬ ಜನ ಸ್ನೇಹಿತರಿದ್ದಾರೆ. ಹಬ್ಬದಂದು ಎಲ್ಲರ ಮನೆಗೂ ಭೇಟಿ ನೀಡಿ ಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿ, ಒಬ್ಬಟ್ಟು ಸೇರಿ ಹಬ್ಬದೂಟ, ಸವಿದು ಬರುತ್ತೇನೆ.  ಕೇರಳದಲ್ಲಿದ್ದಾಗ ಓಣಂ ಆಚರಣೆ ಅದ್ದೂರಿಯಾಗಿರುತ್ತದೆ. ದೀಪಾವಳಿ ಬಂದರೆ, ದೀಪ ಬೆಳಗಿಸಿ, ಪಟಾಕಿ ಹೊಡೆಯುವುದಷ್ಟೇ ಕೆಲಸ. ಇದೀಗ ಮನೆಯಲ್ಲಿ ಸಾಕುಪ್ರಾಣಿಗಳಿರುವುದರಿಂದ ಪಟಾಕಿ ಹೊಡೆಯುವುದನ್ನೂ ಬಿಟ್ಟಿದ್ದೇನೆ.

| ನೀತು ಬಾಲ

 

ಹಬ್ಬದೂಟಕ್ಕೆ ಚಕ್ಕರ್, ಮದುವೆ ಊಟಕ್ಕೆ ಹಾಜರ್

ಹಬ್ಬಕ್ಕೆ ಇನ್ನೇನು ಎರಡು ದಿನ ಇದೆ ಎನ್ನುವಷ್ಟರಲ್ಲೇ ಮನೆ ಶುಚಿ ಮಾಡಿಕೊಳ್ಳುವ ಮೂಲಕ ಸಡಗರ ಶುರುವಾಗುತ್ತದೆ. ನಮ್ಮದು ಮೂಲ ಹಾಸನ ಆಗಿರುವುದರಿಂದ ಅಲ್ಲಿಯೇ ಹಬ್ಬ ಆಚರಿಸುತ್ತೇವೆ. ಬೆಳಗ್ಗೆ ಎಣ್ಣೆಸ್ನಾನ, ಲಕ್ಷ್ಮೀ ಪೂಜೆ, ಅರಿಶಿನ ದಾರ ಕಟ್ಟಿಕೊಳ್ಳುವುದು ನಮ್ಮ ಮನೆಯಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿದೆ. ದೀಪಾವಳಿ ದಿನದಂದು ನಮ್ಮ ಕಡೆ ಹಿರಿಯರ ಪೂಜೆ ಮಾಡುತ್ತಾರೆ. ಹಬ್ಬದ ಅಡುಗೆಯ ಜತೆಗೆ ಮಾಂಸಾಹಾರವೂ ಇರುತ್ತದೆ. ಇನ್ನು ಚಿಕ್ಕವಯಸ್ಸಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಬಗೆಬಗೆ ಹಬ್ಬದ ಅಡುಗೆ ಬಿಟ್ಟು ಅಕ್ಕನ ಜತೆ ಮದುವೆ ಊಟಕ್ಕೆ ಹೋಗಿದ್ದು ಉಂಟು. ಇಂದಿಗೂ ಅದೆಲ್ಲವನ್ನು ನೆನಪಿಸಿಕೊಂಡರೆ ನಗು ಬರುತ್ತದೆ.

| ಲೇಖಾ ಚಂದ್ರ

 

ಹಬ್ಬಕ್ಕೆ ಸ್ವಂತ ವ್ಯವಹಾರ ಶುರುವಾಯ್ತು

ಈ ಬಾರಿಯ ದೀಪಾವಳಿ ನನ್ನ ಪಾಲಿಗೆ ತುಂಬ ವಿಶೇಷವಾದದ್ದು. ಯಾಕೆಂದರೆ, ಸ್ವಂತ ಬಿಜಿನೆಸ್ ಆರಂಭಿಸಿದ್ದೇನೆ. ಅದನ್ನು ಹೊರತುಪಡಿಸಿದರೆ, ಪ್ರತಿ ವರ್ಷದಂತೆ ದೀಪಾವಳಿ ಬಂತೆಂದರೆ, ದೀಪಗಳಿಂದ ಮನೆಯನ್ನು ಅಲಂಕರಿಸುವುದು ನನ್ನ ಇಷ್ಟದ ಕೆಲಸಗಳಲ್ಲಿ ಒಂದು. ಮನೆಯನ್ನು ಸಿಂಗರಿಸುವುದು. ಪೂಜೆ ಮತ್ತು ಅಡುಗೆಯ ಜವಾಬ್ದಾರಿ ಅಮ್ಮನದು. ನಾಲ್ಕೈದು ಮುತೆôದೆಯರನ್ನು ಕರೆದು ಅವರಿಗೆ ಅರಿಶಿಣ ಕುಂಕುಮ ನೀಡುವುದು, ನೈವೇದ್ಯ ಮಾಡುವುದು, ಬಳಿಕ ಸಂಜೆಯಾಗುತ್ತಲೆ ಅಲ್ಪ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದು ಇದು ನಮ್ಮ ಮನೆಯ ದೀಪಾವಳಿ ಆಚರಣೆ. ಚಿಕ್ಕವಳಿದ್ದಾಗ ಬೆಳಗ್ಗೆ ಪಟಾಕಿ ಹೊಡೆಯಲು ಶುರುಮಾಡಿದರೆ, ರಾತ್ರಿವರೆಗೂ ಹೊಡೆಯುತ್ತಿದ್ದೆ. ಇದೀಗ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಹಾಗಾಗಿ ಪಟಾಕಿ ಹೊಡೆಯುವುದು ವಿರಳ.

| ಸುಶ್ಮಿತಾ ಗೌಡ