ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹ ಮಾಡಿತ್ತು. ನಮ್ಮ ಅಧಿಕಾರಿಗಳು ತಾಂತ್ರಿಕ ಸಮಿತಿ ಮುಂದೆ, ನಾವು ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡಲಷ್ಟೇ ಶಕ್ತವಾಗಿದ್ದೇವೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ಇದರ ಪರಿಣಾಮವಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಮೊದಲು ಆದೇಶ ನೀಡಿತು. ನಂತರ 5 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿವರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ತಿಂಗಳ 27 ರವರೆಗೂ ನೀರು ಹರಿಸುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿ, ದಳದ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಎದುರಾಗಿತ್ತು. ಆಗಲೂ ರಾಜ್ಯ ನೀರು ಹರಿಸಿದೆ. ಬಿಜೆಪಿ ಸರ್ಕಾರ ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಹರಿಸುವುದಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದ ದಾಖಲೆಯೂ ನಮ್ಮ ಬಳಿ ಇದೆ. ಆದರೂ ಇಂದು ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು ಮಾತನಾಡುತ್ತಿದ್ದಾರೆ ಎಂದರು.
ನಾವು ಉತ್ತಮ ಮಳೆ ನಿರೀಕ್ಷೆ ಮಾಡಿದ್ದೆವು. ಆದರೆ ಮಳೆ ಅಭಾವ ಎದುರಾಗಿದೆ. ಈ ಮಧ್ಯೆ ಮಂಡ್ಯ ಹಾಗೂ ಇತರೆ ಭಾಗದ ರೈತರ ಬೆಳೆ ಉಳಿಸುವ ಉದ್ದೇಶದಿಂದ ಜಮೀನಿಗೆ ನೀರು ಹರಿಸಿ ಅವರ ರಕ್ಷಣೆ ಮಾಡಿದ್ದೇವೆ. ನ್ಯಾಯಾಲಯ ಎರಡೂ ರಾಜ್ಯಗಳ ಅರ್ಜಿ ಹಾಗೂ ಎರಡೂ ರಾಜ್ಯಗಳ ರೈತರ ಅರ್ಜಿಗಳನ್ನು ತಿರಸ್ಕರಿಸಿ, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರವಾಗಿದೆ. ನ್ಯಾಯಾಲಯ ಈ ವಿಚಾರವಾಗಿ ಕೆಳಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದು, ಈಗ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅಗತ್ಯ ಎಲ್ಲ ಇಲಾಖೆಗಳ ಅನುಮತಿ ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡು ಪಾಲಿನ ನೀರು ಹರಿಸಲು ನಾವು ಬದ್ಧರಾಗಿದ್ದೇವೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಹ, ನಿಮ್ಮ ಪಾಲಿನ ನೀರು ನಿಮಗೆ ಸಿಗಲಿದೆ, ಹೀಗಿರುವಾಗ ಕರ್ನಾಟಕದವರು ಎಷ್ಟಾದರೂ ಆಣೆಕಟ್ಟೆ ಕಟ್ಟಿಕೊಳ್ಳಲಿ ಬಿಡಿ. ನೀವೇಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಈ ವಿಚಾರವಾಗಿ ಕೆಳಹಂತದಲ್ಲೇ ತೀರ್ಮಾನ ಮಾಡಿ ಎಂದು ತಿಳಿಸಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸ್ನೇಹಿತರು ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಒತ್ತಡ ಹಾಕಲಿ ಎಂದು ಆಗ್ರಹಿಸಿದರು.
ಈ ಪರಿಸ್ಥಿತಿಯಲ್ಲಿ ರಾಜಕಾರಣ ಮಾತನಾಡಲು ನನಗೆ ಇಚ್ಛೆ ಇಲ್ಲ. ನಾನು ರಾಜಕಾರಣ ಮಾಡಬಹುದು. ಎಲ್ಲರಿಗೂ ಉತ್ತರ ನೀಡುವಷ್ಟು ಶಕ್ತಿ ಜನ ನಮಗೆ ನೀಡಿದ್ದಾರೆ. ಕುಮಾರಣ್ಣ, ಯಡಿಯೂರಪ್ಪ, ಬೊಮ್ಮಾಯಿ ಅವರ ಪ್ರತಿ ಮಾತಿಗೂ ಅವರ ಸರ್ಕಾರದ ಸಮಯದಲ್ಲಿ ಏನಾಗಿತ್ತು ಎಂದು ದಾಖಲೆ ಸಮೇತ ಉತ್ತರ ನೀಡಬಲ್ಲೆ ಎಂದು ಹೇಳಿದರು.