ನೆರೆಪೀಡಿತ ತಾಲೂಕ್ಕಾಗಿ ಘೋಷಿಸಿ

ಶಿವು ಹುಣಸೂರು
ಮಳೆ ಮತ್ತು ಪ್ರವಾಹದಿಂದ ಹುಣಸೂರು ತಾಲೂಕು ತತ್ತರಿಸಿದ್ದರೂ ರಾಜ್ಯ ಸರ್ಕಾರ ತಾಲೂಕನ್ನು ನೆರೆಪೀಡಿತ ಪ್ರದೇಶವೆಂದು ಘೋಷಣೆ ಮಾಡದಿರುವ ಬಗ್ಗೆ ನಾಗರೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿದ ರಣಭೀಕರ ಮಳೆಯಿಂದಾದ ಪ್ರವಾಹ ಹಾಗೂ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಜೀವನದಿ ಲಕ್ಷ್ಮಣತೀರ್ಥ ಕಂಡು ಕೇಳರಿಯದ ರೀತಿಯಲ್ಲಿ ಉಕ್ಕಿ ಹರಿದಿದೆ. ನದಿಪಾತ್ರದ ಹಲವಾರು ಗ್ರಾಮಗಳು, ಮನೆಗಳು, ಕೃಷಿ ಭೂಮಿಗಳು ನಾಶವಾಗಿವೆ. ಮನೆ ಕಳೆದುಕೊಂಡವರು ಬೀದಿಗೆ ಬಂದಿದ್ದಾರೆ. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನೀರುಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ. ಬರುವ ಮೂರು ದಿನಗಳ ಕಾಲ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತರನ್ನು ಇನ್ನಷ್ಟು ಕಂಗೆಡಿಸಿದೆ.

ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕರು ಇಡೀ ತಾಲೂಕನ್ನು ಸುತ್ತಿ ಹಾನಿಯನ್ನು ಕಳೆದೊಂದು ವಾರದಿಂದ ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ತಾಲೂಕು ಅಧಿಕಾರಿಗಳು ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ನಡೆಸಿದ್ದಾರೆ.

ಎನ್‌ಡಿಆರ್‌ಎಫ್‌ಗೆ ಮೊರೆ: ಹುಣಸೂರಿನಲ್ಲಿ ಪ್ರಸ್ತುತ ಜನಪ್ರತಿನಿಧಿಗಳು ಯಾರೂ ಇಲ್ಲ.ಹಾಗಾಗಿ ಅದಿಕಾರಿಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿಗೆ ನಾಗರಿಕರಿಂದ ಮತ್ತು ಸಂತ್ರಸ್ತರಿಂದ ಶ್ಲಾಘನೆ ವ್ಯಕ್ತವಾಗಿದೆ. ತಾಲೂಕಿನಲ್ಲಿ ಅತಿಯಾದ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದರೂ ಜಿಲ್ಲೆಯ ನಂಜನಗೂಡು, ಎಚ್.ಡಿ.ಕೋಟೆ ಮತ್ತು ತಿ.ನರಸೀಪುರ ತಾಲೂಕುಗಳನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಿ ಹುಣಸೂರನ್ನು ಕೈಬಿಟ್ಟಿರುವ ಬಗ್ಗೆ ತಾಲೂಕಿನ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕ ಪರಿಹಾರ: ಅಧಿಕಾರಿಗಳು ಸಂತ್ರಸ್ತರಿಗೆ ಎಸ್‌ಡಿಆರ್‌ಎಫ್ ನಿಧಿಯಡಿ ಪರಿಹಾರ ಒದಗಿಸಲು ಮುಂದಾಗಿರುವುದು ಸರಿ. ಆದರೆ ಇವು ಕೇವಲ ತಾತ್ಕಾಲಿಕ ಪರಿಹಾರವಾಗಲಿದೆಯೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ ಎನ್ನುವುದು ನಾಗರಿಕರ ಅಭಿಪ್ರಾಯ. ಸಂಪೂರ್ಣ ನಾಶವಾಗಿರುವ ಗ್ರಾಮಗಳು, ಮನೆ, ಮಠ, ಗದ್ದೆ, ಜಮೀನು, ರಸ್ತೆ ಚರಂಡಿಗಳ ಪುನರ್ ನಿರ್ಮಾಣ ಕಾರ್ಯ ಆಗುವುದಿಲ್ಲ.

ಗ್ರಾಮಗಳ ಮರುನಿರ್ಮಾಣ ಅಸಾಧ್ಯ: ಎನ್‌ಡಿಆರ್‌ಎಫ್ ನಿಧಿಯಿಂದ ನೀಡಲಾಗುವ ಹಣದಿಂದ ಪ್ರವಾಹದಿಂದ ಕೊಚ್ಚಿ ಹೋಗಿರುವ ಗ್ರಾಮಗಳ ಮರು ನಿರ್ಮಾಣ ಸಾಧ್ಯವಿಲ್ಲ. ಸಂಪೂರ್ಣ ಹಾಳಾಗಿರುವ ರಸ್ತೆ, ನಾಲೆಗಳ ಮರು ನಿರ್ಮಾಣಕ್ಕೆ ನೆರೆ ಪೀಡಿತ ಪ್ರದೇಶವೆಂದು ಘೋಷಣೆಯಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಘೋಷಿಸುವ ಪ್ಯಾಕೇಜ್ ಯೋಜನೆಗಳು ಲಭ್ಯವಾಗಲು ಸಾಧ್ಯವಾಗಲಿದೆ. ನೆರೆಪೀಡಿತ ಪ್ರದೇಶ ಘೋಷಣೆಯಿಂದ ಹೆಚ್ಚುವರಿ ಅನುದಾನದೊಂದಿಗೆ ಹಾನಿಗೊಳಗಾದ ಸೇತುವೆ, ಶಾಲೆ, ಅಂಗನವಾಡಿಗಳ ನಿರ್ಮಾಣದ ಜತೆಗೆ ಪ್ಯಾಕೇಜ್ ಯೋಜನೆಗಳನ್ನು ಪಡೆಯಬಹುದಾಗಿದೆ. ಇಲ್ಲದಿದ್ದರೆ ಸಂತ್ರಸ್ತರು ಈಗ ಕೊಡುವ ಪರಿಹಾರದಿಂದಷ್ಟೆ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ.

600ಕ್ಕೂ ಹೆಚ್ಚು ಮನೆ ನಾಶ: ತಾಲೂಕಿನಲ್ಲಿ ಕಂದಾಯ ಇಲಾಖೆಯ ಅಂದಾಜಿನ ಪ್ರಕಾರ 600ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಬುಧವಾರದವರೆಗೆ 264 ಹಾನಿಗೊಳಗಾಗಿರುವ ಮನೆಗಳ ದಾಖಲೆಗಳನ್ನು ಪಡೆಯಲಾಗಿದೆ. 4 ಸಾವಿರ ಎಕರೆಯಷ್ಟು ಕೃಷಿ ಭೂಮಿಯಲ್ಲಿ ಬೆಳೆದ ಶುಂಠಿ, ತಂಬಾಕು, ಮುಸುಕಿನ ಜೋಳ, ಹತ್ತಿ, ಬಾಳೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳು ನಾಶವಾಗಿದೆ. ಗ್ರಾಮೀಣ ಭಾಗಗಳಲ್ಲಿ ಈಗಾಗಲೇ 204 ಮನೆಗಳಿಗೆ ಪರಿಹಾರ ಕಿಟ್‌ಗಳನ್ನು ಒದಗಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 135 ಸಂತ್ರಸ್ತರಿಗೆ ಪರಿಹಾರದ ಕಿಟ್‌ಗಳನ್ನು ನೀಡಲಾಗಿದೆ. ಹನಗೋಡು ಹೆಚ್ಚು ಹಾನಿಗೊಳಗಾದ ಹೋಬಳಿಯಾಗಿದೆ.

ವಾಸಕ್ಕೆ ಯೋಗ್ಯವಲ್ಲದ ಮನೆಗಳು: ತಾಲೂಕಿನಲ್ಲಿ ವಾಸಕ್ಕೆ ಮತ್ತೆ ಹೋಗಲಾಗದ ಹಲವು ಮನೆಗಳಿವೆ. ಈ ಪೈಕಿ ನಿಲುವಾಗಿಲು 3, ರಾಮಪಟ್ಣಣ 3, ನಗರಸಭೆ ವ್ಯಾಪ್ತಿಯಲ್ಲಿ 6, ಕೂಡ್ಲೂರು 1, ಕಾಮಗೌಡನಹಳ್ಳಿ 1, ಬಿಲ್ಲೇನಹೊಸಳ್ಳಿ 6, ಸಿಂಡೇನಹಳ್ಳಿ 1, ಕೋಣನಹೊಸಳ್ಳಿ 6, ದೊಡ್ಡಹೆಜ್ಜೂರು 2, ಚನ್ನಸೋಗೆ 2 ಮನೆಗಳು ವಾಸಕ್ಕೆ ಯೋಗ್ಯವಲ್ಲವೆಂದು ಘೋಷಿಸಲಾಗಿದೆ. ಪರಿಹಾರ ಕಾರ್ಯಕ್ರಮಗಳಿಗಾಗಿ 1.25 ಕೋಟಿ ರೂ.ಇದ್ದು, ಹಣದ ಕೊರತೆ ಇಲ್ಲವೆಂದು ತಹಸೀಲ್ದಾರ್ ಐ.ಇ.ಬಸವರಾಜು ತಿಳಿಸುತ್ತಾರೆ.

ಹಾಡಿಗಳ ದುಸ್ಥಿತಿ: ಮಳೆ ಹಾನಿಗೆ ತಾಲೂಕಿನ ಲಕ್ಷ್ಮಣತೀರ್ಥ ನದಿಪಾತ್ರ ವ್ಯಾಪ್ತಿಯ ಗಡಿಯಂಚಿನ 19ಕ್ಕೂ ಗಿರಿಜನ ಹಾಡಿಗಳು ಸಂಕಷ್ಟ ಅನುಭವಿಸುತ್ತಿವೆ. ಗಿರಿಜನರ ಜಮೀನುಗಳು ಕೂಡ ನೀರಿನಿಂದ ಆವೃತವಾಗಿವೆ. ಈ ಪೈಕಿ ಕೋಣನಹೊಸಳ್ಳಿ, ಕೊಳವಿಗೆ, ಭಾರತವಾಡಿ, ನಾಗಪುರ ಕೇಂದ್ರದ ಕೆಲವು ಭಾಗ, ಕೊಟ್ಟಿಗೆ ಕಾವಲ್, ಹಳೆಪೆಂಜಳ್ಳಿ ಹಾಡಿ ಮುಂತಾದ ಕಡೆ ವ್ಯಾಪಕ ಹಾನಿಯಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ಈ ಎಲ್ಲ ಜನರಿಗೆ ಭದ್ರತೆ ಒದಗಿಸುವುದು ಅನಿವಾರ್ಯವಾಗಿದೆ.

ತಾಲೂಕನ್ನು ನೆರೆಪೀಡಿತ ಪ್ರದೇಶವೆಂದು ಸರ್ಕಾರ ಶೀಘ್ರ ಘೋಷಿಸಲಿದೆ. ತಾಲೂಕಿನಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತಾದ ಮಾಹಿತಿಯನ್ನು ಈಗಾಗಲೇ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಸ್ವತಃ ಜಿಲ್ಲಾಧಿಕಾರಿ ಸಹ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಜನತೆ ಆತಂಕ ಪಡಬೇಕಿಲ್ಲ.
ಬಿ.ಎನ್.ವೀಣಾ, ಎಸಿ, ಹುಣಸೂರು ಉಪವಿಭಾಗ

ತಾಲೂಕಿನಲ್ಲಿ 50 ಕೋಟಿ ರೂ. ಪ್ರಮಾಣದಲ್ಲಿ ಆಸ್ತಿಪಾಸ್ತಿ, ಬೆಳೆಗಳು ನಷ್ಟ ಹೊಂದಿವೆ. ಜಿಲ್ಲಾಡಳಿತ ಮೂರು ತಾಲೂಕುಗಳನ್ನು ಮಾತ್ರ ನೆರೆಪೀಡಿತ ಪ್ರದೇಶವೆಂದು ಘೋಷಿಸುವ ಮೂಲಕ ಹುಣಸೂರು ತಾಲೂಕಿಗೆ ಮಲತಾಯಿ ಧೋರಣೆ ತೋರಿರುವುದು ಖಂಡನೀಯ. ಹುಣಸೂರು ತಾಲೂಕನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
ಹೊಸೂರ ಕುಮಾರ್, ಜಿಲ್ಲಾಧ್ಯಕ್ಷ, ರಾಜ್ಯ ರೈತಸಂಘ ಮತ್ತು ಹಸಿರುಸೇನೆ, ಹುಣಸೂರು

Leave a Reply

Your email address will not be published. Required fields are marked *