ಕೈ ಸಹಮತ ಪಡೆದೇ ದಳ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು: ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಬೆನ್ನಲ್ಲೇ ಕೆಲವರು ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಇನ್ನುಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸುವ ಮೊದಲು ಕಾಂಗ್ರೆಸ್ ನಾಯಕರ ಸಹಮತ ಪಡೆಯಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಮೈತ್ರಿ ವ್ಯವಸ್ಥೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವಾಗ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೇಳುವುದು ಒಳಿತು. ಈಗಲೇ ಯಾರ ಹೆಸರನ್ನೂ ಘೊಷಣೆ ಮಾಡುವುದು ಬೇಡ. ಹಾಸನ ಮತ್ತು ಮಂಡ್ಯ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಪಕ್ಷದ ಘನತೆ, ಗೌರವಕ್ಕೆ ಚ್ಯುತಿ ತರುತ್ತಿದ್ದರು. ಆದ್ದರಿಂದ ಅಲ್ಲಿ ಹೆಸರು ಪ್ರಕಟಿಸಬೇಕಾಯಿತು. ಎಂದರು. ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಾಧ್ಯಕ್ಷ ವಿಶ್ವನಾಥ್ ಇನ್ನುಳಿದ ಅಭ್ಯರ್ಥಿಗಳ ಆಯ್ಕೆ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಪಟ್ಟಿ ಅಂತಿಮಗೊಳಿಸುತ್ತಾರೆ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, 8 ಕ್ಷೇತ್ರಗಳು ಜೆಡಿಎಸ್​ಗೆ ಸಿಕ್ಕಿವೆ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆಯೋ ನಮ್ಮ ಸರ್ಕಾರ ಅಷ್ಟು ಭದ್ರವಾಗುತ್ತದೆ. ಸಮ್ಮಿಶ್ರ ಸರ್ಕಾರವನ್ನು ಮತ್ತಷ್ಟು ಗಟ್ಟಿಯಾಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿಯೂ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕರ್ತರ ವಾಗ್ವಾದ

ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ವಿಷಯ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ತುಮಕೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರು ಮಾಜಿ ಪ್ರಧಾನಿ ನಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಬೇಕು. ಸ್ಪರ್ಧಿಸಿದಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅಭೂತಪೂರ್ವವಾಗಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಮೈತ್ರಿ ಸರ್ಕಾರದಲ್ಲಿ ಸೀಮಿತ ಅಧಿಕಾರ ಇದೆ. ಕಾಂಗ್ರೆಸ್ ಬಿಟ್ಟುಕೊಟ್ಟ ನಿಗಮ-ಮಂಡಳಿ ಸ್ಥಾನಗಳನ್ನು ಜೆಡಿಎಸ್ ಪಡೆದುಕೊಂಡಿದೆ. ಹೀಗಾಗಿ ನಿಗಮ- ಮಂಡಳಿಯಲ್ಲಿ ಸ್ಥಾನಮಾನ ನೀಡಿಲ್ಲ ಎಂಬ ಅಸಮಾಧಾನ ನಮ್ಮ ಪಕ್ಷದವರಲ್ಲೇ ಇದೆ. ನಾನು ಅನುಭವಿಸುತ್ತಿರುವ ಹಿಂಸೆಯನ್ನು ಹೊರಗೆ ಹೇಳಿಕೊಳ್ಳುವಂತಿಲ್ಲ.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ