ಮಧ್ಯಪ್ರದೇಶದಲ್ಲಿ ಕಮಲ್ ಸರ್ಕಾರ?

ಅತಂತ್ರದಲ್ಲೂ ಕಾಂಗ್ರೆಸ್​ಗೆ ಆನೆಬಲ

ನವದೆಹಲಿ: ಕ್ಷಣಕ್ಷಣದ ಕುತೂಹಲದೊಂದಿಗೆ ಮಂಗಳವಾರ ಇಡೀ ದಿನ ರಾಷ್ಟ್ರದ ಗಮನಸೆಳೆದಿದ್ದ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ತಡರಾತ್ರಿ ವೇಳೆಗೆ ಹೊರಬಿದ್ದಿದ್ದು, 114 ಸ್ಥಾನ ಗೆದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಲೇ ಅಧಿಕಾರ ಬಿಜೆಪಿ ಪಾಲಾಗುವುದನ್ನು ತಪ್ಪಿಸಲು ತಂತ್ರಗಾರಿಕೆ ಮೆರೆದ ಕೈ ನಾಯಕರು ಹಿರಿಯ ಮುಖಂಡ ಕಮಲ್​ನಾಥ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಬಿಎಸ್ಪಿ, ಎಸ್ಪಿಯ ಮೂವರು ಹಾಗೂ ನಾಲ್ವರು ಪಕ್ಷೇತರರ ಬೆಂಬಲಪತ್ರ ಮುಂದಿಟ್ಟು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಿಎಂ ರೇಸ್​ನಲ್ಲಿ ಕಮಲ್​ನಾಥ್ ಜತೆ ಜ್ಯೋತಿರಾದಿತ್ಯ ಸಿಂಧಿಯಾ ಹೆಸರು ಕೇಳಿಬಂದಿದೆ ಯಾದರೂ ಅಂತಿಮವಾಗಿ ಕಮಲ್​ನಾಥ್​ಗೆ ಅದೃಷ್ಟ ಒಲಿಯುವ ಸಾಧ್ಯತೆ ನಿಚ್ಚಳವಾಗಿದೆ.

ರಾಜಸ್ಥಾನಕ್ಕೆ ಗೆಹ್ಲೋಟ್?

200 ಸ್ಥಾನಗಳ ಪೈಕಿ 99ರಲ್ಲಿ ಗೆದ್ದು (1 ಕ್ಷೇತ್ರ ಮತ ಎಣಿಕೆ ರದ್ದು) ಪಕ್ಷೇತರರ ಬೆಂಬಲದೊಂದಿಗೆ ರಾಜಸ್ಥಾನದಲ್ಲಿ ಸರ್ಕಾರ ರಚನೆಗೆ ಸಜ್ಜಾಗಿರುವ ಕಾಂಗ್ರೆಸ್​ನ ಮುಖ್ಯಮಂತ್ರಿ ಆಗಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಆಯ್ಕೆಯಾಗುವ ಸಾಧ್ಯತೆ ಇದೆ. ಗುರುವಾರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮಿಜೋರಾಂಗೆ ಝೋರ್ಮತಂಗಾ

ಮಿಜೋ ನ್ಯಾಷನಲ್ ಫ್ರಂಟ್ ಮೈತ್ರಿಕೂಟದ ಅಧ್ಯಕ್ಷ ಬಂಡಾಯ ನಾಯಕ ಝೋರ್ಮತಂಗಾ ಮಿಜೋರಾಂನ ನೂತನ ಮುಖ್ಯಮಂತ್ರಿ ಆಗಿ ಶನಿವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಛತ್ತೀಸ್​ಗಢ ಸಸ್ಪೆನ್ಸ್

ಮುಖ್ಯಮಂತ್ರಿ ಪಟ್ಟಕ್ಕಾಗಿ ಹಿರಿಯ ಕಾಂಗ್ರೆಸ್ಸಿಗರಾದ ಭೂಪೇಶ್ ಬಾಗೇಲಾ, ಟಿ.ಎಸ್.ಸಿಂಗ್​ದೇವ್ ಹಾಗೂ ತಾಮ್ರಧ್ವಜ್ ಸಾಹು ನಡುವೆ ತೀವ್ರ ಪೈಪೋಟಿ ನಡೆದಿದೆ.

ಕೆಸಿಆರ್ ಪ್ರಮಾಣ

ತೆಲಂಗಾಣದಲ್ಲಿ ಧೂಳೆಬ್ಬಿಸಿದ ಟಿಆರ್​ಎಸ್ ಮುಖ್ಯಸ್ಥ ಚಂದ್ರಶೇಖರ ರಾವ್ ಗುರುವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.


ಗೆಲುವಿನ ಬಳಿಕ ಸಿಎಂ ಆಯ್ಕೆ ಕಸರತ್ತು

ಪಂಚರಾಜ್ಯ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದೆ. ಜತೆಗೆ ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಸಿಎಂ ಆಯ್ಕೆ ಕುರಿತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಬುಧವಾರ ಬಿಡುವಿಲ್ಲದ ರಾಜಕೀಯ ಚಟುವಟಿಕೆ ನಡೆಯಿತು. ಈ ಕುರಿತ ಚಿತ್ರಣ ಇಲ್ಲಿದೆ.

ಕಾಂಗ್ರೆಸ್ ಪಾಲಾದ ಮಧ್ಯಪ್ರದೇಶ

ಭೋಪಾಲ್: ಕುತೂಹಲಕ್ಕೆ ಕಾರಣವಾಗಿದ್ದ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವತ್ತ ಕಾಂಗ್ರೆಸ್ ದಾಪುಗಾಲಿಟ್ಟಿದೆ. ಮಂಗಳವಾರ ಮಧ್ಯರಾತ್ರಿವರೆಗೂ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿತ್ತು. ಅಂತಿಮವಾಗಿ ಕಾಂಗ್ರೆಸ್ 114 ಹಾಗೂ ಬಿಜೆಪಿ 109 ಸ್ಥಾನಗಳಲ್ಲಿ ಗೆಲುವುದು ಸಾಧಿಸಿವೆ ಎಂದು ಕೇಂದ್ರ ಚುನಾವಣೆ ಆಯೋಗ ಘೋಷಿಸಿದೆ. ಅತಂತ್ರ ವಿಧಾನಸಭೆ ರೂಪುಗೊಂಡ ಹಿನ್ನೆಲೆಯಲ್ಲಿ ಎಸ್​ಪಿ, ಬಿಎಸ್​ಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಕಾಂಗ್ರೆಸ್ ಮುಂದಾಗಿದೆ. ಛತ್ತೀಸ್​ಗಢ, ರಾಜಸ್ಥಾನ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಸೋಲಿನ ಹೊಣೆಹೊತ್ತ ಚೌಹಾಣ್: ‘ಕೆಲವೊಮ್ಮೆ ನಾವು ಪಡೆದ ಮತಗಳಿಗಿಂತ ಸೀಟು ಲೆಕ್ಕಾಚಾರ ಮುಖ್ಯವಾಗುತ್ತದೆ. ನಿರೀಕ್ಷೆಗಿಂತ ಕಡಿಮೆ ಸೀಟು ಪಡೆದಿರುವುದು ಬೇಸರ ತಂದಿದೆ. ಇದಕ್ಕೆ ನಾನೇ ನೇರ ಕಾರಣ. ಈ ಬಾರಿ ಜನರ ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎನಿಸುತ್ತದೆ’ ಎಂದು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ‘ನನ್ನ ಬಾಲ್ಯದಿಂದಲೂ ಜನರ ನೋವನ್ನು ನೋಡಿದ್ದೇನೆ. ಅದಕ್ಕೆ ತಕ್ಕಂತೆ ಜನಪರವಾದ ಕೆಲಸ ಮಾಡಿರುವ ತೃಪ್ತಿಯಿದೆ. ಆದಾಗ್ಯೂ ಮಧ್ಯಪ್ರದೇಶದ 7.5 ಕೋಟಿ ಜನರಲ್ಲಿ ಯಾರಿಗಾದರೂ ನಾನು ಮನ ನೋಯಿಸಿದ್ದರೆ ಕ್ಷಮೆ ಕೇಳುತ್ತೇನೆ. ಬಹುಮತವಿಲ್ಲದ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಪ್ರಸ್ತಾಪವನ್ನೂ ಮಾಡುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಚೌಹಾಣ್ ಹೇಳಿದ್ದಾರೆ.

ಕಾಂಗ್ರೆಸ್​ಗೆ ಸವಾಲು

ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹಾಗಾಗಿ, 10 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಶಿವರಾಜ್ ಸಿಂಗ್ ಚೌಹಾಣ್ ಸವಾಲು ಹಾಕಿದ್ದಾರೆ. ಇದಕ್ಕೂ ಮುನ್ನ ಚೌಹಾಣ್ ನಿವಾಸಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಕಮಲ್​ನಾಥ್, ಮುಂದಿನ ಸರ್ಕಾರಕ್ಕೆ ಸಹಕಾರ ಕೋರಿದರು.

ಜಯ ಕಾಣದ ಪ್ರತಿಪಕ್ಷ ನಾಯಕ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿದ್ದರೂ ಚೌಹಾಣ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಅಜಯ್ ಸಿಂಗ್ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸಿಂಗ್ ಸೋತಿದ್ದಾರೆ.

ಜನಮತ ಗಳಿಸಿದ ಸಿಎಂ

ಶಿವರಾಜ್ ಸಿಂಗ್ ಸಂಪುಟದ 13 ಸಚಿವರು ಹಾಗೂ 70ಕ್ಕೂ ಅಧಿಕ ಶಾಸಕರು ಸೋತಿದ್ದರೂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಅಭ್ಯರ್ಥಿಯನ್ನು ಸುಮಾರು 59 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆಡಳಿತ ಹಿಡಿಯುತ್ತಿರುವ ಕಾಂಗ್ರೆಸ್​ಗಿಂತ ಬಿಜೆಪಿ ಶೇ.0.1 ಮತ ಹೆಚ್ಚು ಪಡೆದಿದೆ.

ಕಾಂಗ್ರೆಸ್ ಹಕ್ಕುಮಂಡನೆ

ಪೂರ್ಣ ಬಹುಮತಕ್ಕೆ ಕೇವಲ 2 ಸೀಟು ಕಡಿಮೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಸರ್ಕಾರ ರಚನೆಗೆ ಕಸರತ್ತು ನಡೆಸಬಹುದು ಎಂಬ ಮಾತುಗಳಿದ್ದವು. ಹೀಗಾಗಿ ಅಧಿಕೃತ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಮಲ್​ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ದಿಗ್ವಿಜಯ್ ಸಿಂಗ್ ಅವರನ್ನೊಳಗೊಂಡ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಪ್ರಸ್ತಾಪ ಇಟ್ಟಿದೆ. ಒಟ್ಟು 121 ಶಾಸಕರ ಬೆಂಬಲ ಇರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಶಾಸಕಾಂಗ ಸಭೆ ನಾಯಕರ ಆಯ್ಕೆ ಮಾಡಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.

ಇಂದು ಬಿಜೆಪಿ ಸಭೆ

ಲೋಕಸಭೆ ಚುನಾವಣೆ ತಯಾರಿ ಹಾಗೂ ಪಂಚರಾಜ್ಯ ಚುನಾವಣೆ ಸೋಲಿನ ಆತ್ಮಾವಲೋಕನಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಭೆ ಕರೆದಿದ್ದಾರೆ. ರಾಷ್ಟ್ರೀಯ, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಚುನಾವಣೆ ಉಸ್ತುವಾರಿ ಹಾಗೂ ಇತರ ರಣತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.

ಮೂರು ರಾಜ್ಯಗಳಲ್ಲಿ 38 ಸಚಿವರಿಗೆ ಸೋಲು!

ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದ ಬಿಜೆಪಿ ಸರ್ಕಾರದ ಬರೋಬ್ಬರಿ 38 ಸಚಿವರು ಸೋತಿದ್ದಾರೆ. ರಾಜಸ್ಥಾನದಲ್ಲಿ 17, ಮಧ್ಯಪ್ರದೇಶದಲ್ಲಿ 13 ಹಾಗೂ ಛತ್ತೀಸ್​ಗಢದಲ್ಲಿ 8 ಸಚಿವರು ಮರು ಆಯ್ಕೆಯಾಗಲು ವಿಫಲರಾಗಿದ್ದಾರೆ.

ಫಲಿತಾಂಶ ವಿಳಂಬವೇಕೆ?

ಯೋಧರು ಹಾಗೂ ಸರ್ಕಾರಿ ನೌಕರರ ಮತಪತ್ರ ಎಣಿಕೆ, ಎವಿಎಂ ಜತೆಗೆ ವಿವಿಪ್ಯಾಟ್ ಹೊಂದಾಣಿಕೆ, ತುರುಸಿನ ಸ್ಪರ್ಧೆ ಹಾಗೂ ಫಲಿತಾಂಶದ ಅವಾಂತರ ತಪ್ಪಿಸುವ ಸಲುವಾಗಿ ಮತ ಎಣಿಕೆ ಕಾರ್ಯ ವಿಳಂಬವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಈ ಬಾರಿ ಮತಪತ್ರಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿತ್ತು. ಇವಿಎಂ ಬಗ್ಗೆ ಅನವಶ್ಯಕ ಗೊಂದಲ ನಿರ್ವಣವಾದ ಹಿನ್ನೆಲೆಯಲ್ಲಿ ಇವಿಎಂ ಮತಗಳನ್ನು ವಿವಿಪ್ಯಾಟ್​ನಲ್ಲಿನ ಮತಕ್ಕೆ ಹೋಲಿಕೆ ಮಾಡಿ ಮತ ಎಣಿಕೆ ನಡೆಸಲಾಗಿತ್ತು. ಈ ಕಾರಣದಿಂದ ಮಧ್ಯರಾತ್ರಿವರೆಗೂ ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಮತ ಎಣಿಕೆ ಕಾರ್ಯ ನಡೆದಿತ್ತು.

ರಾಜಸ್ಥಾನದಲ್ಲಿ 1 ಸೀಟು ಕೊರತೆ

ರಾಜಸ್ಥಾನದಲ್ಲೂ ಪೂರ್ಣ ಬಹುಮತದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೊನೆ ಹಂತದಲ್ಲಿ ಎಡವಿದೆ. 199 ಸೀಟುಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 99 ಸೀಟುಗಳನ್ನು ಪಡೆದಿದೆ. ಆದರೆ 10 ಪಕ್ಷೇತರ ಹಾಗೂ ಇತರರ ಬೆಂಬಲ ಪಡೆದು ಸರ್ಕಾರ ರಚಿಸಲು ರಾಜ್ಯಪಾಲರಿಗೆ ಕಾಂಗ್ರೆಸ್ ಹಕ್ಕೊತ್ತಾಯ ಮಾಡಿದೆ. ಬಿಜೆಪಿಯು ಅಂತಿಮವಾಗಿ 73 ಸೀಟು ಪಡೆದರೆ ಇತರ ಸಣ್ಣಪುಟ್ಟ ಪಕ್ಷ ಹಾಗೂ ಪಕ್ಷೇತರರು 28 ಸೀಟು ಗಳಿಸಿದ್ದಾರೆ.

ತೃತೀಯ ರಂಗ ಪ್ರಸ್ತಾಪಿಸಿದ ಕೆಸಿಆರ್

ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ತೃತೀಯ ರಂಗಕ್ಕೆ ಜೀವ ನೀಡಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ. ರಾಷ್ಟ್ರ ರಾಜಕಾರಣ ಹಾಗೂ ದೇಶದ ಅಭಿವೃದ್ಧಿಗೆ ಮುನ್ನೋಟ ಹೊಂದಿರುವುದಾಗಿ ಕೆಸಿಆರ್ ಹೇಳಿರುವುದಲ್ಲದೇ, ತೃತೀಯ ರಂಗಕ್ಕೆ ಜೀವ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ರಹಿತ ರಾಜಕೀಯ ಕೂಟದ ಅಗತ್ಯವಿದೆ. ಈ ಕುರಿತು ಸಮಾನ ಮನಸ್ಕ ಪಕ್ಷಗಳ ಜತೆಗೆ ಸಭೆ ನಡೆಸುವುದಾಗಿ ಕೆಸಿಆರ್ ಘೋಷಿಸಿದ್ದಾರೆ.

ಸಿಎಂ ಆಯ್ಕೆ ಜವಾಬ್ದಾರಿ ರಾಹುಲ್​ಗೆ

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ಮಾಡುವ ಜವಾಬ್ದಾರಿಯನ್ನು ಆಯಾ ರಾಜ್ಯದ ಶಾಸಕಾಂಗ ಸಭೆಗಳು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡಿವೆ.

ಮೂರೂ ರಾಜ್ಯಗಳಲ್ಲಿ ಇಬ್ಬರು ಹಿರಿಯ ಮುಖಂಡರ ನಡುವೆ ಸಿಎಂ ಹುದ್ದೆಗೆ ಸ್ಪರ್ಧೆ ಏರ್ಪಟ್ಟಿದೆ. ಮಧ್ಯಪ್ರದೇಶದಲ್ಲಿ ಕಮಲ್​ನಾಥ್-ಜ್ಯೋತಿರಾದಿತ್ಯ ಸಿಂಧಿಯಾ, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ಹಾಗೂ ಛತ್ತೀಸ್​ಗಢದಲ್ಲಿ ಭೂಪೇಶ್ ಬಾಗೇಲಾ-ಟಿ.ಎಸ್.ಸಿಂಗ್​ದೇವ್ ನಡುವೆ ಪೈಪೋಟಿಯಿದೆ. ಈ ಆರು ನಾಯಕರ ಹೆಸರನ್ನು ಪಕ್ಷದ ವೀಕ್ಷಕರು ರಾಹುಲ್ ಗಾಂಧಿಗೆ ಶಿಫಾರಸು ಮಾಡಿದ್ದಾರೆ. ಪ್ರತ್ಯೇಕ ಚರ್ಚೆಯ ಬಳಿಕ ಗುರುವಾರ ಸಂಜೆಯೊಳಗೆ ಮುಖ್ಯಮಂತ್ರಿ ಹೆಸರು ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢದಲ್ಲಿ ಪ್ರತ್ಯೇಕ ಶಾಸಕಾಂಗ ಸಭೆಗಳು ಬುಧವಾರ ನಡೆದಿವೆ. ಆದರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಶಾಸಕರು ವಿಫಲವಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಆಯ್ಕೆಯ ಜವಾಬ್ದಾರಿ ನೀಡಲಾಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಹೆಚ್ಚಿನ ಶಾಸಕರು ಕಮಲ್​ನಾಥ್ ಹಾಗೂ ಅಶೋಕ್ ಗೆಹ್ಲೋಟ್ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ. ಆದರೆ ಯುವ ನಾಯಕತ್ವದ ಬಗ್ಗೆ ರಾಹುಲ್ ಒಲವು ಹೊಂದಿದ್ದಾರೆ. ಹೀಗಾಗಿ ರಾಹುಲ್ ಆಯ್ಕೆ ಮೇಲೆ ಕುತೂಹಲ ಹುಟ್ಟಿಸಿದೆ. ಇನ್ನು ಛತ್ತೀಸ್​ಗಢದಲ್ಲಿಯೂ ಬಾಗೇಲಾ ಹಾಗೂ ಸಿಂಗ್ ನಡುವೆ ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಇಬ್ಬರ ಹೆಸರನ್ನು ಕೂಡ ರಾಹುಲ್​ಗೆ ಶಿಫಾರಸು ಮಾಡಲು ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲ 6 ಮುಖಂಡರನ್ನು ದೆಹಲಿಗೆ ಕರೆಯಿಸಿಕೊಂಡು ಮಾತನಾಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂದು ಕೆಸಿಆರ್ ಪ್ರಮಾಣವಚನ?

ತೆಲಂಗಾಣದ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಕೆ.ಸಿ.ಚಂದ್ರಶೇಖರ್ ರಾವ್ ಗುರುವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಪೂರ್ಣಪ್ರಮಾಣದ ಸಚಿವ ಸಂಪುಟ ಕೂಡ ಪ್ರಮಾಣವಚನ ಸ್ವೀಕರಿಸಲಿದೆ ಎಂದು ವರದಿಯಾಗಿದೆ.

ಮಿಜೋರಾಂನಲ್ಲಿ ಶನಿವಾರ ಪ್ರಮಾಣ

ಮಿಜೋರಾಂನಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಎಂಎನ್​ಎಫ್ ಮುಖ್ಯಸ್ಥ ಜೋರಾಮ್ ತಂಗಾ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಬ್ಬ ಶಾಸಕನನ್ನು ಹೊಂದಿರುವ ಬಿಜೆಪಿ ಕೂಡ ಈ ಸರ್ಕಾರದಲ್ಲಿ ಸೇರುವುದು ಬಹುತೇಕ ಖಚಿತವಾಗಿದೆ.

ಕೈ ಪರ ನಿಂತ ದಲಿತರು

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಢ ರಾಜ್ಯಗಳಲ್ಲಿ ದಲಿತ ಮತಗಳ ಮೇಲೆ ಮತ್ತೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಮೂರು ರಾಜ್ಯಗಳಲ್ಲಿನ ಒಟ್ಟಾರೆ 181 ಎಸ್​ಸಿ, ಎಸ್​ಟಿ ಮೀಸಲು ಸೀಟುಗಳಲ್ಲಿ ಕಾಂಗ್ರೆಸ್ 108 ಪಡೆದಿದ್ದರೆ, ಬಿಜೆಪಿ 59ಕ್ಕೆ ತೃಪ್ತಿಗೊಂಡಿದೆ. ಕಳೆದ ಬಾರಿ ಬಿಜೆಪಿ 128 ಹಾಗೂ ಕಾಂಗ್ರೆಸ್ 42 ಸೀಟು ಪಡೆದಿತ್ತು.

ಮತ್ತೆ ಮೋದಿ ಸರ್ಕಾರ

ಪಂಚರಾಜ್ಯ ವಿಧಾನಸಭೆ ಚುನಾವಣೆ ಬಳಿಕವೂ ಜಾಗತಿಕ ಆರ್ಥಿಕ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆ ಪರ ಬ್ಯಾಟಿಂಗ್ ಮಾಡುತ್ತಿವೆ. ವಿಧಾನಸಭೆ ಚುನಾವಣೆ ಸೋಲಿನ ಹೊರತಾಗಿಯೂ ಎನ್​ಡಿಎಗೆ 2019ರಲ್ಲಿ ಸರಳ ಬಹುಮತ ದೊರೆಯಲಿದೆ ಎಂದು ಸಿಎಲ್​ಎಸ್​ಎ, ಕ್ರೆಡಿಟ್ ಸೂ, ಯುಬಿಎಸ್, ಎಚ್​ಎಸ್​ಬಿಸಿ, ಸಿಟಿ ಹಾಗೂ ಇತರ ಹಣಕಾಸು ಸಂಸ್ಥೆಗಳು ವಿಶ್ವಾಸ ವ್ಯಕ್ತಪಡಿಸಿವೆ. ಸಿಎಲ್​ಎಸ್​ಎ ಪ್ರಕಾರ 245-280 ಸೀಟು ಗೆಲ್ಲಲು ಎನ್​ಡಿಎಗೆ ಯಾವುದೇ ಸಮಸ್ಯೆಯಿಲ್ಲ. ಸ್ಥಳೀಯ ಆಡಳಿತ ವಿರೋಧಿ ಅಲೆಯ ಕಾರಣದಿಂದ ಈ ಫಲಿತಾಂಶ ಬಂದಿದೆ. ರಾಷ್ಟ್ರೀಯವಾಗಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಕ್ರೆಡಿಟ್ ಸೂ, ಯುಬಿಎಸ್, ಸಿಟಿ ಹಾಗೂ ಎಚ್​ಎಸ್​ಬಿಸಿ ತಿಳಿಸಿವೆ.

ರಾಗಾ ಟೆಂಪಲ್ ರನ್ ಲಾಭ

ಹಿಂದಿ ಹೃದಯ ಭಾಗದ ಮೂರು ರಾಜ್ಯಗಳಲ್ಲಿ 68 ಕ್ಷೇತ್ರಗಳಲ್ಲಿ ಪ್ರಭಾವ ಬೀರುವ 10 ಹಿಂದು ಧಾರ್ವಿುಕ ಕೇಂದ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದು, 35ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಧ್ಯಪ್ರದೇಶದಲ್ಲಿ 13, ರಾಜಸ್ಥಾನದಲ್ಲಿ 12 ಹಾಗೂ ಛತ್ತೀಸ್​ಗಢದಲ್ಲಿ 10 ಸೀಟುಗಳಲ್ಲಿ ಟೆಂಪಲ್ ರನ್ ಪ್ರಭಾವದಿಂದ ಕಾಂಗ್ರೆಸ್ ಗೆದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಖುಷಿ ನೀಡಿದೆ. ಬಿಜೆಪಿಯ ಋಣಾತ್ಮಕ ರಾಜಕೀಯಕ್ಕೆ ಮತದಾರರು ನೀಡಿರುವ ಉತ್ತರ ಇದಾಗಿದೆ.

| ಸೋನಿಯಾ ಗಾಂಧಿ, ಯುಪಿಎ ಅಧ್ಯಕ್ಷೆ