ಪಾಕಿಸ್ತಾನಕ್ಕೆ ಐಎಂಎಫ್ ನೆರವು: 42 ಸಾವಿರ ಕೋಟಿ ರೂ. ಸಾಲ ನೀಡಿಕೆ

ಇಸ್ಲಾಮಾಬಾದ್: ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಒದಗಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಕೊನೆಗೂ ಒಪ್ಪಿಗೆ ನೀಡಿದೆ. ಮೂರು ವರ್ಷಗಳಲ್ಲಿ 42 ಸಾವಿರ ಕೋಟಿ ರೂ. ನೆರವು ನೀಡುವ ಬಗ್ಗೆ ಐಎಂಎಫ್ ಹಾಗೂ ಪಾಕಿಸ್ತಾನ ಸರ್ಕಾರದ ನಡುವೆ ಮಾತುಕತೆ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಸಮಗ್ರ ಆರ್ಥಿಕತೆ ಬಲಪಡಿಸುವುದು, ಆಂತರಿಕ ಹಾಗೂ ಬಾಹ್ಯ ಆರ್ಥಿಕ ಅಸಮತೋಲನವನ್ನು ಕಡಿಮೆ ಮಾಡುವುದು, ಅಭಿವೃದ್ಧಿಯ ಹಾದಿಯನ್ನು ಸುಗಮಗೊಳಿಸುವುದು ಹಾಗೂ ಸರ್ಕಾರದ ವೆಚ್ಚ ಸಾಮರ್ಥ್ಯ ಹೆಚ್ಚಿಸಿ ಪಾರದರ್ಶಕತೆ ತರುವ ಉದ್ದೇಶದಿಂದ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡುತ್ತಿರುವುದಾಗಿ ಐಎಂಎಫ್ ಹೇಳಿಕೊಂಡಿದೆ. ಏ. 29ರಂದು ಐಎಂಎಫ್ ಹಾಗೂ ಪಾಕ್ ಅಧಿಕಾರಿಗಳ ನಡುವೆ ಮಾತುಕತೆ ಆರಂಭವಾಗಿತ್ತು. ಆದರೆ ನೆರವು ನೀಡಲು ಐಎಂಎಫ್ ಕೆಲ ಕಠಿಣ ನಿಯಮಗಳನ್ನು ವಿಧಿಸಿತ್ತು. ಇದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತ ಮಾತುಕತೆ ಹಿನ್ನೆಲೆಯಲ್ಲಿ ಒಪ್ಪಂದ ಅಂತಿಮಗೊಳ್ಳುವುದು ವಿಳಂಬವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇಮ್ರಾನ್ ಮನವಿ

ಕಳೆದ ವರ್ಷ ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸಿದ ಸಮಯದಲ್ಲೇ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿತ್ತು. 2018ರ ಆಗಸ್ಟ್​ನಲ್ಲಿ ಇಮ್ರಾನ್ ಖಾನ್ ವಿಶ್ವಸಂಸ್ಥೆಗೆ ಮನವಿ ಮಾಡಿ ಆರ್ಥಿಕ ನೆರವು ಕೋರಿದ್ದರು. ಆದರೆ ಇದು ತಿರಸ್ಕೃತಗೊಂಡಿತ್ತು. ಇತ್ತೀಚೆಗೆ ಪಾಕ್​ನ ಆರ್ಥಿಕ ತಂಡವನ್ನು ಇಮ್ರಾನ್ ಬದಲಿಸಿ, ಹೊಸ ತಂಡ ರಚಿಸಿದ್ದರು. ಇದಾದ ಬಳಿಕ ಆರ್ಥಿಕ ನೆರವು ನೀಡಲು ಐಎಂಎಫ್ ಒಪ್ಪಿಗೆ ನೀಡಿತ್ತು.

ತಜ್ಞರಿಂದ ಎಚ್ಚರಿಕೆ

ಐಎಂಎಫ್​ನಿಂದ ಅಪಾರ ಪ್ರಮಾಣದಲ್ಲಿ ಹಣ ಕಾಸು ನೆರವು ಪಡೆಯುವುದರಿಂದ ಪಾಕ್ ಸವಾಲಿನ ಸುನಾಮಿ ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾಲದ ಮರುಪಾವತಿಗಾಗಿ ಸರ್ಕಾರವು ಸಂಪನ್ಮೂಲ ಕ್ರೋಡೀಕರಿಸಬೇಕಾಗುತ್ತದೆ. ಆಗ ದಿನ ಬಳಕೆ ವಸ್ತುಗಳು, ವಿದ್ಯುತ್, ಇಂಧನ ಬೆಲೆಯನ್ನು ಸರ್ಕಾರ ಏರಿಕೆ ಮಾಡಬೇಕಾಗುತ್ತದೆ. ಇದರಿಂದ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.

ಭಾರತದ ವಿರೋಧ

ಪಾಕ್​ಗೆ ಹಣಕಾಸು ನೆರವು ನೀಡುವ ಕುರಿತು ಇತ್ತೀಚೆಗೆ ನಡೆದ ಐಎಂಎಫ್ ಸಭೆಯಲ್ಲಿ ರ್ಚಚಿಸಲಾಗಿತ್ತು. ಈ ಪ್ರಸ್ತಾವನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಆರೋಪ ಪಾಕ್ ಮೇಲಿದೆ. ಇಂಥ ರಾಷ್ಟ್ರಕ್ಕೆ ಹಣ ನೀಡುವುದರಿಂದ ಐಎಂಎಫ್ ಜಾಗತಿಕ ಮಟ್ಟದಲ್ಲಿ ಘನತೆ ಕಳೆದುಕೊಳ್ಳುತ್ತದೆ ಎಂದಿತ್ತು.

ಕಾರಿಡಾರ್ ಸುಳಿಯಲ್ಲಿ

ಚೀನಾ ಜತೆಗಿನ ಕಾರಿಡಾರ್ ಯೋಜನೆಯಿಂದಾಗಿ ಪಾಕ್ ಭಾರಿ ಪ್ರಮಾಣದ ಸಾಲದ ಸುಳಿಗೆ ಸಿಲುಕಿದೆ. ಆರಂಭದಲ್ಲಿ ಈ ಯೋಜನೆ ಮೊತ್ತ 42 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಈ ಮೊತ್ತ ಲಕ್ಷ ಕೋಟಿ ರೂ. ಮೀರಿದೆ. ಇದನ್ನು ಪಾಕಿಸ್ತಾನ ಚೀನಾಕ್ಕೆ ಬಡ್ಡಿ ಸಮೇತ ಪಾವತಿ ಮಾಡಬೇಕಿದೆ. ಇದಲ್ಲದೆ ಹಲವು ಯೋಜನೆಗಳಿಗೆ ಚೀನಾ ಅಪಾರ ಸಾಲ ನೀಡಿದೆ.

Leave a Reply

Your email address will not be published. Required fields are marked *