ನವದೆಹಲಿ: ಭಾರತದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಅವರು ಅದಾನಿ ವಿಲ್ಮಾರ್ ಲಿಮಿಟೆಡ್ನಲ್ಲಿರುವ ಶೇ.43.97 ಪಾಲನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ತಮ್ಮ ಸಂಪೂರ್ಣ ಷೇರನ್ನು ಮಾರಾಟ ಮಾಡಲು ಈಗಾಗಲೇ ಹಲವು ಬಹುರಾಷ್ಟ್ರೀಯ ಗ್ರಾಹಕ ವಸ್ತುಗಳ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಮಾರಾಟದ ಒಪ್ಪಂದವನ್ನು 1 ತಿಂಗಳೊಳಗೆ ಪೂರ್ಣಗೊಳಿಸುವ ಸಾಧ್ಯತೆ ಇದ್ದು, ಮೂರು ಬಿಲಿಯನ್ ಡಾಲರ್ಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಅದಾನಿ ವಿಲ್ಮಾರ್ ಲಿಮಿಟೆಡ್, ಅದಾನಿ ಗ್ರೂಪ್ ಮತ್ತು ಸಿಂಗಾಪುರದ ವಿಲ್ಮಾರ್ ಇಂಟರ್ನ್ಯಾಷನಲ್ ನಡುವಿನ ಜಂಟಿ ಉದ್ಯಮವಾಗಿದೆ. ಫಾರ್ಚೂನ್ ಬ್ರಾಂಡ್ ಹೆಸರಿನಲ್ಲಿ ಖಾದ್ಯ ತೈಲ, ಬೇಳೆ ಹಿಟ್ಟು ಮತ್ತು ಇತರೆ ಪ್ಯಾಕ್ ಮಾಡಿದ ದಿನಸಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಅದಾನಿ ವಿಲ್ಮಾರ್ನಲ್ಲಿ ಅದಾನಿ ಗ್ರೂಪ್ನ ಷೇರುಗಳನ್ನು ಮಾರಾಟ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಅದಾನಿ ಎಂಟರ್ಪೆಸಸ್ ಆಗಸ್ಟ್ನಲ್ಲಿ ಸ್ಪಷ್ಟಪಡಿಸಿತ್ತು.
ಮಾಧ್ಯಮಗಳ ವರದಿ ನಂತರ ಅದಾನಿ ವಿಲ್ಮಾರ್ನಲ್ಲಿನ ಸಂಭವನೀಯ ಷೇರು ಮಾರಾಟದ ಕುರಿತು ಗೌತಮ್ ಅದಾನಿ ಸಮೂಹದಿಂದ ಅದಾನಿ ವಿಲ್ಮಾರ್ನಲ್ಲಿನ ತನ್ನ ಪಾಲನ್ನು ಮೂರು ಬಿಲಿಯನ್ ಡಾಲರ್ಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂಬ ಸ್ಪಷ್ಟೀಕರಣವು ಬಂದಿದೆ.
ಅದಾನಿ ವಿಲ್ಮಾರ ಅನ್ನು 1999ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಗೆ ಐಪಿಒ (ಇನಿಷಿಯಲ್ ಪಬ್ಲಿಕ್ ಆರಿಂಗ್) ಫೆಬ್ರವರಿ 2022ರಲ್ಲಿ ಬಂದಿತು. ಪ್ರಸ್ತುತ, ಅದಾನಿ ಗ್ರೂಪ್ ಜಂಟಿ ಉದ್ಯಮದಲ್ಲಿ ಶೇ.43.97ರಷ್ಟು ಪಾಲನ್ನು ಹೊಂದಿದ್ದು, ಶೇ.12.006 ಸಾರ್ವಜನಿಕ ಷೇರುಗಳನ್ನು ಹೊಂದಿದೆ. ಸಾರ್ವಜನಿಕ ಷೇರುಗಳ ವಿಚಾರದಲ್ಲಿ ಅದಾನಿ ಗ್ರೂಪ್ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅದಾನಿ ವಿಲ್ಮಾರ್ ಖಾದ್ಯ ತೈಲ ವಿಭಾಗದಲ್ಲಿರುವ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 55,262 ಕೋಟಿ ರೂ. ಆದಾಯ ಗಳಿಸಿದ್ದಲ್ಲದೆ 607 ಕೋಟಿ ರೂ. ನಿವ್ವಳ ಲಾಭವನ್ನು ಪಡೆದಿತ್ತು. ಆದರೆ ಇತ್ತೀಚೆಗೆ ಕೊನೆಗೊಂಡಿದ್ದ ಸೆಪ್ಟೆಂಬರ್ ತೆಮಾಸಿಕದಲ್ಲಿ ಅದಾನಿ ವಿಲ್ಮಾರ್ ಆದಾಯ ಶೇ.13ರಷ್ಟು ಇಳಿಕೆ ಕಂಡು 12,267 ಕೋಟಿ ರೂ.ಗೆ ಕುಸಿದಿತ್ತು. ಈ ಅವಧಿಯಲ್ಲಿ ಕಂಪನಿ 131 ಕೋಟಿ ರೂ. ನಷ್ಟ ಅನುಭವಿಸಿತ್ತು.